ರಾಜಕೀಯ

ನೂತನ ಸಿಎಂ, ಹೊಸ ಸಂಪುಟ ವದಂತಿಯಿಂದ ಚಿಂತೆಗೀಡಾದ ವಲಸಿಗ ಸಚಿವರು!

Manjula VN

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಹೊಸ ಸಂಪುಟ ರಚನೆಯಾಗುವ ವದಂತಿಗಳು ತೀವ್ರ ಸಂಚಲನ ಮೂಡಿಸಿದ್ದು, ಈ ಬೆಳವಣಿಗೆ ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದ ವಲಸಿಗ ಸಚಿವರಲ್ಲಿ ಚಿಂತೆ ಹಾಗೂ ಆತಂಕವನ್ನು ಹುಟ್ಟುಹಾಕಿದೆ. 

ವಲಸಿಗ ನಾಯಕರು ಯಡಿಯೂರಪ್ಪ ಅವರನ್ನೇ ನಂಬಿಕೊಂಡು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಹಾಗೆ ವಲಸೆ ಬರುವ ಸಮಯದಲ್ಲಿ ಅವರಿಗೆ ಸ್ಥಾನಮಾನದ ಭರವಸೆ ನೀಡಿದ್ದು, ಉಪ ಚುನಾವಣೆಗಳನ್ನು ನಡೆಸಿದ್ದು ಬಳಿಕ ಸ್ಥಾನಮಾನ ಲಭಿಸುವಂತೆ ನೋಡಿಕೊಂಡಿದ್ದು ಯಡಿಯೂರಪ್ಪ ಅವರಾಗಿದ್ದಾರೆ. ಹೀಗಾಗಿ ಇದೀಗ ಯಡಿಯೂರಪ್ಪ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದರೆ ತಮ್ಮ ಗತಿಯೇನು ಎಂಬ ಆತಂಕ ಅವರನ್ನು ಕಾಡಲು ಆರಂಭಿಸಿದೆ. 

ಹೊಸ ಮುಖ್ಯಮಂತ್ರಿ ಆಯ್ಕೆ ಬಳಿಕ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಅನೇಕ ಸಚಿವರನ್ನು ಕೈಬಿಡಲಾಗುತ್ತದೆ ಎಂಬ ವದಂತಿಗಳು ಈಗಾಗಲೇ ದಟ್ಟವಾಗಿ ಹಬ್ಬಿದ್ದರಿಂದ ಸಹಜವಾಗಿಯೇ ವಲಸಿಗ ಸಚಿವರು ಒತ್ತಡದಲ್ಲಿ ಸಿಲುಕುವಂತೆ ಮಾಡಿದೆ. 

ನಿನ್ನೆಯಷ್ಟೇ ಕೆಲ ವಲಸಿಗ ಸಚಿವರು ಕೈಯಲ್ಲಿ ಪತ್ರಗಳನ್ನು ಹಿಡಿದು ಮುಖ್ಯಮಂತ್ರಿಗಳ ಕಚೇರಿಗೆ ಭೇಟಿ ನೀಡಿದ್ದು, ಈ ಭೇಟಿ ಸಾಮೂಹಿಕ ರಾಜೀನಾಮೆ ಕುರಿತು ಊಹಾಪೋಹಗಳಿಗೆ ದಾರಿ ಮಾಡಿತ್ತು. ಬಳಿಕ ಪ್ರತಿಕ್ರಿಯೆ ನೀಡಿದ ಕೆಲ ನಾಯಕರು ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ತೆರೆ ಎಳೆದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮಾತನಾಡಿ, ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆಂಬುದು ನಿಜಕ್ಕೂ ಹಾಸ್ಯಸ್ಪದ ವಿಚಾರ. ಸಂಪುಟಕ್ಕೆ ರಾಜೀನಾಮೆ ನೀಡಲು ನಾವೇನು ಮುರ್ಖರಲ್ಲ. ನಾವು ಪಕ್ಷದ ಸದಸ್ಯರಾಗಿದ್ದೇವೆ. ಹೈಕಮಾಂಡ್ ನಿರ್ಧಾರಕ್ಕೆ ನಾವೂ ತಲೆಬಾಗುತ್ತೇವೆ. ಕೆಲವರ ವರ್ಗಾವಣೆ ಪತ್ರ ನನ್ನ ಕೈಯಲ್ಲಿತ್ತು. ರಾಜೀನಾಮೆ ಪತ್ರವಲ್ಲ. 2019-2021 ಅತ್ಯಂತ ಕಠಿಣ ವರ್ಷಗಳಾಗಿದ್ದು, ಇಂತಹ ಕಠಿಣ ವರ್ಷಗಳು ಈ ಹಿಂದೆದೂ ಇರಲಿಲ್ಲ ಎಂದು ಹೇಳಿದ್ದಾರೆ. 

ಇದರಂತೆ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಎಸ್'ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರೂ ಹೇಳಿಕೆ ನೀಡಿ, ಪಕ್ಷದ ನಿರ್ಧಾರಕ್ಕೆ ತಲೆಬಾಗುವುದಾಗಿ ತಿಳಿಸಿದ್ದಾರೆ. 

ನಾವು ಯಡಿಯೂರಪ್ಪ ಅವರ ನಾಯಕತ್ವ, ಪಕ್ಷದ ಸಿದ್ಧಾಂತ ಹಾಗೂ ಶಿಸ್ತನ್ನು ಒಪ್ಪಿಕೊಂಡು ಬಿಜೆಪಿಗೆ ಸೇರ್ಪಡೆಗೊಂಡಿದ್ದೇವೆ. ಹೈಕಮಾಂಡ್ ನಿರ್ಧಾರದಂತೆ ನಾವು ನಡೆದುಕೊಳ್ಳುತ್ತೇವೆ. ಕಳೆದ ಒಂದೂವರೆ ವರ್ಷದಿಂದ ಯಡಿಯೂರಪ್ಪ ಅವರೊಂದಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ಅವರೊಂದಿಗೆ ಮಾತನಾಡಲು ನಾವು ಅವರನ್ನು ಭೇಟಿ ಮಾಡಿದ್ದೆವು. ಮಾನವೀಯತೆ ದೃಷ್ಟಿಯಿಂದ ಮುಖ್ಯಮಂತ್ರಿಗಳೊಂದಿಗೆ ನಿಲ್ಲಲು ಹೋಗಿದ್ದೆವು ಎಂದು ಸುಧಾಕರ್ ಅವರು ಹೇಳಿದ್ದಾರೆ. ಇದೇ ವೇಳೆ ಸಾಮೂಹಿಕ ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. 

ಎಂಟಿಬಿ ನಾಗರಾಜ್ ಅವರು ಮಾತನಾಡಿ, ಪಕ್ಷದ ನಾಯಕತ್ವ ರಾಜೀನಾಮೆ ಕೇಳಿದರೆ ನಾನು ಕೊಡುತ್ತೇನೆಂದು ತಿಳಿಸಿದ್ದಾರೆ. 

ಈ ನಡುವೆ ಮುಖ್ಯಮಂತ್ರಿಗಳ ಆಪ್ತ ಮೂಲಗಳು ಮಾಹಿತಿ ನೀಡಿ, ಮುಖ್ಯಮಂತ್ರಿಗಳನ್ನು ಭೇಟಿಯಾದ ವಲಸಿಗ ಸಚಿವರು ನಾಯಕತ್ವ ಬದಲಾವಣೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆಂದು ತಿಳಿಸಿದೆ. 

SCROLL FOR NEXT