ರಾಜಕೀಯ

ಬಿಎಸ್'ವೈ ಸರ್ಕಾರಕ್ಕೆ 2 ವರ್ಷ: ಸಂಭ್ರಮದ ನಡುವಲ್ಲೇ ನಾಯಕತ್ವ ಬದಲಾವಣೆ ಚರ್ಚೆ, ವರಿಷ್ಠರ ಮೇಲೆ ಭಾರ ಹಾಕಿದ ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಿದೆ. ಈ ಸಂಭ್ರಮದ ನಡುವಲ್ಲೂ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತ ವಿಚಾರ ಹಲವು ಗೊಂದಲ ಹಾಗೂ ಕುತೂಹಲವನ್ನು ಮೂಡಿಸಿದೆ. 

ಭಾನುವಾರ ಸಂಜೆ ಹೊತ್ತಿಗೆ ಪಕ್ಷದ ವರಿಷ್ಠರಿಂದ ಸಂದೇಶ ಬರಲಿದೆ ಎಂಬ ವರದಿಗಳ ನಡುವೆಯೇ “ಪಕ್ಷದ ವರಿಷ್ಠರು ಸೂಚನೆ ನೀಡಿದರೆ ರಾಜೀನಾಮೆ ಸಲ್ಲಿಸುತ್ತೇನೆ’ ಎಂದು ಯಡಿಯೂರಪ್ಪ ಹೇಳಿದ್ದರು. ಸಂಜೆ ವೇಳೆಗೆ ಮತ್ತೆ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು, ಹೈಕಮಾಂಡ್ ನಿಂದ ಈವರೆಗೂ ಯಾವುದೇ ಸಂದೇಶಗಳೂ ಬಂದಿಲ್ಲ, ರಾತ್ರಿ ಅಥವಾ ಬೆಳಿಗ್ಗೆ ಸಂದೇಶ ಬರಬಹುದು ಎಂದು ಹೇಳಿದ್ದರು. ಈ ಹೇಳಿಕೆಗಳು ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿತ್ತು. 

ನಾಯಕತ್ವ ಬದಲಾವಣೆ ವಿಚಾರ ಕುರಿತ ಗೊಂದಲಗಳು ಒಂದೆಡೆ ಮುಂದುವರೆದಿದ್ದರೆ, ಮತ್ತೊಂದೆಡೆ ತಮ್ಮ ವಯಸ್ಸನ್ನು ಲೆಕ್ಕಿಸದ ಯಡಿಯೂರಪ್ಪ ಅವರು ಚುರುಕಿನಿಂದ ತಮ್ಮ ಕರ್ತವ್ಯವನ್ನು ಮುಂದುವರೆಸಿದ್ದಾರೆ.

ನಿನ್ನೆಯಷ್ಟೇ ಬೆಳಗಾವಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು,ಪರಿಸ್ಥಿತಿ ಪರಿಶೀಲಿಸಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿರುವ ಕೆಲಸ ಮಾಡಿದ್ದರು. ಈ ಮೂಲಕ  ತಮ್ಮದೇ ರೀತಿಯಲ್ಲಿ ರಾಜಕೀಯ ಸಂದೇಶವನ್ನು ನೀಡಿದ್ದರು.  

ಇಂತಹ ಕಠಿಣ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಗೆ ಸೂಚಿಸಿದರೆ ಭವಿಷ್ಯದಲ್ಲಿ ಬಿಜೆಪಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದರು. ಈ ಬೆಳವಣಿಗೆ ಇದೀಗ ವರಿಷ್ಠರು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು, ರಾಜೀನಾಮೆ ನೀಡುವ ಬಗ್ಗೆ ಹೈಕಮಾಂಡ್'ನಿಂದ ಈ ವರೆಗೂ ಸಂದೇಶ ಬಂದಿಲ್ಲ. ಸೋಮವಾರ ಸಂಜೆ ಒಳಗೆ ಬರಬಹುದು. ಸಂದೇಶ ಬಂದ ಕೂಡಲೇ ರಾಜೀನಾಮೆ ನೀಡುತ್ತೇನೆ. ಸಿಎಂ ಸ್ಥಾನದಲ್ಲಿ ಮುಂದುವರೆಯಿರಿ ಎಂಬ ಸಂದೇಶ ಬಂದರೆ ಮುಂದುವರೆಯುತ್ತೇನೆಂದು ಹೇಳಿದ್ದರು. 

ಸರ್ಕಾರ 2 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಸೋಮವಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತೇನೆ. ಬಳಿಕ ಮುಂದಿನದ್ದನ್ನು ತೀರ್ಮಾನಿಸುತ್ತೇನೆ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆಗೆ ಸಿದ್ಧ ಎಂಬ ಮಾತನ್ನು ಎರಡು ತಿಂಗಳ ಹಿಂದೆಯೇ ಹೇಳಿದ್ದೇನೆ. ಈಗಲೂ ಅದೇ ಮಾತನ್ನು ಪುನರಾವರ್ತಿಸುತ್ತಿದ್ದೇನೆ. ಹೈಕಮಾಂಡ್ ನಿಂದ ಸಂದೇಶ ಬರುವ ಕೊನೆಯ ಕ್ಷಣದವರೆಗೂ ಕೆಲಸ ಮಾಡಲು ತೀರ್ಮಾನಿಸಿದ್ದೇನೆ. ಇನ್ನೂ 10-15 ವರ್ಷಗಳ ಕಾಲ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆಂದು ತಿಳಿಸಿದ್ದರು.

ಮುಖ್ಯಮಂತ್ರಿಗಳ ಆಪ್ತ ಮೂಲಗಳು ಮಾಹಿತಿ ನೀಡಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದರು ಸಂಪೂರ್ಣವಾಗಿ ಕೇಂದ್ರೀಯ ನಾಯಕರ ನಿರ್ಧಾರವಾಗಿರುತ್ತದೆ. ಯಡಿಯೂರಪ್ಪ ಅವರ ನಿರ್ಧಾರವಾಗಿರುವುದಿಲ್ಲ ಎಂದು ತಿಳಿಸಿದೆ. 

ವಿಧಾನಸೌಧದಲ್ಲಿ ಕಾರ್ಯಕ್ರಮ: ಸರ್ಕಾರದ ಸಾಧನೆಯ ಸ್ಮರಣೆ
ಈ ನಡುವೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಉಪ ಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ. 

ತಾವೇ ಖುದ್ದಾಗಿ ಹಲವು ಸಚಿವರು, ಶಾಸಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿರುವ ಜನಸ್ನೇಹಿ ಆಡಳಿತದ ಎರಡು ವರ್ಷ, ಸವಾಲುಗಳ ಮೀರಿದ ಸಾಧನಾ ಪರ್ವ ಎಂಬ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಲಾಗುತ್ತದೆ. 

ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಭಾಷಣ ಮಾಡಲಿದ್ದು, ಸರ್ಕಾರದ ಸಾಧನೆಗಳ ಜೊತೆಗೆ ವಿದಾಯ ರೀತಿಯ ಭಾಷಣ ಮಾಡುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. 

SCROLL FOR NEXT