ರಾಜಕೀಯ

ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಯಡಿಯೂರಪ್ಪ ಬೆಳೆಸಿದ್ದಾರೆ: ಮುರುಗೇಶ್ ನಿರಾಣಿ

Lingaraj Badiger

ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿರುವ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸಿದ್ದಾರೆ. ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಯಡಿಯೂರಪ್ಪ ಬೆಳೆಸಿದ್ದು, ಅವರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬಹಳ ನೋವಾಗಿದೆ ಎಂದು ಮಾಜಿ ಸಚಿವ, ಸಿಎಂ ಸ್ಥಾನದ ಆಕಾಂಕ್ಷಿ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಹಂಗಾಮಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಬಳಿಕ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಘೋಷವಾಕ್ಯ ಕೇಳಿದ್ದೇವೆ. 75 ವಯೋಮಾನದವರಿಗೆ ಬಿಜೆಪಿಯಲ್ಲಿ ಹುದ್ದೆ ಬಿಟ್ಟು ಯುವಕರಿಗೆ ಬಿಟ್ಟುಕೊಡಬೇಕೆಂಬ ನಿಯಮ ಇದೆ. ಇದು ಬಿಜೆಪಿ ಸಿದ್ಧಾಂತ. ಈಗ ಹೊಸ ನಾಯಕರ ಆರಿಸುವ ಸಂದರ್ಭ ಬಂದಿದ್ದು, ಹೊಸ ನಾಯಕರನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡುತ್ತಾರೆ. ಬಿಜೆಪಿಯ ಎಲ್ಲಾ ಶಾಸಕರು ಸಿಎಂ ಸ್ಥಾನಕ್ಕೆ ಯೋಗ್ಯರಿದ್ದಾರೆ. ಯಾರೇ ಸಿಎಂ ಆದರೂ ಅವರಿಗೆ ಸಂಘ ಪರಿವಾರ ಹಾಗೂ ಯಡಿಯೂರಪ್ಪನವರ ಮಾರ್ಗದರ್ಶನ ಇರುತ್ತದೆ ಎಂದರು.

ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ನಾನು ಬೆಂಗಳೂರಿನಲ್ಲಿ ಇರದ ಕಾರಣ ರಾಜೀನಾಮೆ ನೀಡಿದ ನಂತರ ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಇಂದು ಭೇಟಿ ಮಾಡಿ ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿದ್ದೇನೆಯೇ ಹೊರತು ರಾಜಕೀಯವಾದ ಚರ್ಚೆಯಾಗಲೀ ಸಿಎಂ ಸ್ಥಾನಕ್ಕೆ ಲಾಬಿಯಾಗಲೀ ಮಾಡಿಲ್ಲ. ಅಧಿಕಾರಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.

ಸಂಘ ಪರಿವಾರದವರ ಪಕ್ಷದವರಿಂದ, ಸಂಘಟನಾಕಾರರಿಂದ ಮಾಹಿತಿಯನ್ನು ವರಿಷ್ಠರು ಪಡೆಯುತ್ತಿದ್ದಾರೆ. ಯಾರಿಗೆ ಅವಕಾಶ ಕೊಟ್ಟರೂ ಸಂತೋಷದಿಂದ ಸ್ವೀಕಾರ ಮಾಡುತ್ತೇವೆ. ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಕತ್ತಿ ಅವರ ಮಾತಿನಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಎಂದು ಮುರುಗೇಶ್ ನಿರಾಣಿ ಹೇಳಿದರು.

ಆಲಂ ಪಾಷ್ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಾದರೂ ಒಬ್ಬರು ಜವಾಬ್ದಾರಿ ಸ್ಥಾನಕ್ಕೆ ಹೋಗುತ್ತಾರೆ ಅಂದರೆ ಆರೋಪ ಸಹಜ.ಆಲಂಪಾಷಾ ಆರೋಪದಲ್ಲಿ ಹುರುಳಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT