ರಾಜಕೀಯ

ಸಿಎಂ ಸ್ಥಾನಕ್ಕೆ ರಾಜಿನಾಮೆ: ಬಿಎಸ್ ವೈ ಬಣದಲ್ಲಿ ನೀರವ ಮೌನ, ರೆಬೆಲ್ ನಾಯಕರ ಮನದಲ್ಲಿ ಸಂಭ್ರಮಾಚರಣೆ

Srinivasamurthy VN

ಬೆಂಗಳೂರು: ಹಲವು ರೀತಿಯ ರಾಜಕೀಯ ಬೆಳವಣಿಗೆಗಳ ಬಳಿಕ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ಇದೀಗ ಅವರದೇ ಪಕ್ಷದ ನಾಯಕರ ನಡುವೆ ಪರ-ವಿರೋಧ ಬಣಗಳಲ್ಲಿ ವಿವಿಧ ರೀತಿಯ ಭಾವನೆಗಳು ಮನೆ ಮಾಡಿವೆ.

ಬಿಎಸ್ ವೈ ರಾಜಿನಾಮೆ ಬೆನ್ನಲ್ಲೇ ಯಡಿಯೂರಪ್ಪ ಪರ ಬಣದಲ್ಲಿ ನೀರವ ಮೌನ ಆವರಿಸಿದ್ದು, ಅಂತೆಯೇ ಅತ್ತ ಬಂಡಾಯ ನಾಯಕರ ಬಣದಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. ರಾಜಿನಾಮೆ ವಿಚಾರವಾಗಿ ಬಹುತೇಕ ಶಾಸಕರು ನಿರಾಶರಾಗಿದ್ದಾರೆಯಾದರೂ ಮತ್ತೊಂದು ಬಣದಲ್ಲಿ ಮುಂದಿನ ಸಿಎಂ ಕುರಿತು  ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.

ಯಡಿಯೂರಪ್ಪ ಅವರ ಆಪ್ತ ಸಹವರ್ತಿ ಮತ್ತು ಮಾಜಿ ರಾಜಕೀಯ ಕಾರ್ಯದರ್ಶಿ ಸಂಸದ ರೇಣುಕಾಚಾರ್ಯ ಅವರು ರಾಜಿನಾಮೆ ವಿಚಾರವಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದು, ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ದುಖಃದ ದಿನ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ  ಹಿನ್ನೆಲೆಯಲ್ಲಿ ಫೇಸ್ ಬುಕ್ ಪೋಸ್ಟ್ ಹಾಕಿದ ರೇಣುಕಾಚಾರ್ಯ ತಮ್ಮ ದುಖಃವನ್ನು ತೋಡಿಕೊಂಡಿದ್ದಾರೆ.

ಅಲ್ಲದೆ ಬಿಎಸ್ ವೈ ಪುತ್ರರಾಜ ಬಿವೈ ರಾಘವೇಂದ್ರ ಮತ್ತು ಬಿವೈ ವಿಜಯೇಂದ್ರ ಅವರು ಮೌನಕ್ಕೆ ಶರಣಾಗಿ ಬಹಿರಂಗವಾಗಿ ಕಾಣಿಸಿಕೊಳ್ಳದೇ ತಮ್ಮ ದುಃಖ ತೋರ್ಪಡಿಸಿಕೊಂಡಿದ್ದಾರೆ.

ಇನ್ನು ಧಾರವಾಡದಲ್ಲಿ ಬಿಜೆಪಿ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯೆ ನೀಡಿದ್ದು ಯಡಿಯೂರಪ್ಪ ಎರಡು ವರ್ಷದಿಂದ ಜನ ಮೆಚ್ಚುವ ಕೆಲಸ ಮಾಡಿದ್ದಾರೆ. ಜನರು ಸಹ ಅಷ್ಟೇ ಗೌರವ ಅವರ ಮೇಲೆ ಇಟ್ಟಿದ್ದಾರೆ. 75 ವರ್ಷ ಮೇಲ್ಪಟ್ಟವರು ಆಡಳಿತದಲ್ಲಿ ಇರಬಾರದು ಅಂತಾ ಪಕ್ಷದ ಅಜೆಂಡಾ ಇದೆ. ಯಡಿಯೂರಪ್ಪ  20 ವರ್ಷದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಪ್ರವಾಹಕ್ಕೆ ಹೃದಯಪೂರ್ವಕವಾಗಿ ಸ್ಪಂದಿಸಿದ್ದಾರೆ, ಪಕ್ಷದ ಅಜೆಂಡಾ ಹಿನ್ನೆಲೆ ಗೌರವಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಯಾರು ಸಿಎಂ ರೇಸ್‌ನಲ್ಲಿ ಇದ್ದಾರೆ ನಮಗೆ ಮಾಹಿತಿ ಇಲ್ಲ. ರಾಜ್ಯ ಕಷ್ಟ ಕಾಲದಲ್ಲಿದೆ, ಜನರ ಮೆಚ್ಚುಗೆ ಗಳಿಸಿ ಸೇವೆ  ಸಲ್ಲಿಸುವಂತರನ್ನು ಸಿಎಂ ಮಾಡಬೇಕು…ಮತ್ತೆ ಬಿಜೆಪಿ ಆಡಳಿತಕ್ಕೆ ತರುವಂತವರನ್ನು ಸಿಎಂ ಮಾಡಬೇಕು. ಕಾರ್ಯಕರ್ತರ ಮನಸ್ಥಿತಿ ವರಿಷ್ಠರಿಗೆ ಗೊತ್ತಿರುತ್ತದೆ, ಪಕ್ಷ ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಇದೆ. ಉತ್ತರ ಕರ್ನಾಟಕದಲ್ಲೇ ನಮ್ಮ ಪಕ್ಷಕ್ಕೆ ಹೆಚ್ಚು ಮತ ಬರುತ್ತವೆ, ಹೀಗಾಗಿ ಇಲ್ಲಿನವರಿಗೇ ಕೊಟ್ಟರೆ  ಅನುಕೂಲ ಎಂದರು.

ಬಂಡಾಯ ಬಣದಲ್ಲಿ ಸಂಭ್ರಮ
ಇನ್ನು ಬಂಡಾಯ ಬಣದಲ್ಲಿ ಗುರುತಿಸಿಕೊಂಡಿರುವ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದ್, ಸಿ.ಪಿ. ಯೋಗೀಶ್ವರ್ ಮತ್ತು ಅಡಗೂರ್ ವಿಶ್ವನಾಥ್ ಅವರ ಬಣ ಕೊಂಚ ಸಂಭ್ರಮದಲ್ಲಿದ್ದಂತೆ ತೋರಿತು. ಬಿಎಸ್ ವೈ ರಾಜಿನಾಮೆ ಘೋಷಣೆಯಾಗುತ್ತಿದ್ದಂತೆಯೇ ಎಲ್ಲ ನಾಯಕರೂ ಪರಸ್ಪರ ಬಹಿರಂಗವಾಗಿಯೇ  ಅಭಿನಂದಿಸಿಕೊಂಡಿದ್ದರು.
 

SCROLL FOR NEXT