ರಾಜಕೀಯ

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹೊಸ ಮುಖಗಳಿಗೆ ಮನ್ನಣೆ-ಕೆಲ ಹಿರಿಯರಿಗೂ ಆದ್ಯತೆ, ಸಂಪುಟ ರಚನೆ ಕಸರತ್ತು 

Sumana Upadhyaya

ಬೆಂಗಳೂರು: ರಾಜ್ಯಸರ್ಕಾರದಲ್ಲಿ ಮುಖ್ಯಮಂತ್ರಿ ನಾಯಕತ್ವ ಬದಲಾವಣೆ ಡ್ರಾಮಾ ಕೊನೆಯಾಗುತ್ತಿದ್ದಂತೆ ವಿಧಾನ ಸೌಧದ ಪಡಸಾಲೆಯಲ್ಲಿ ಈಗ ಕೇಳಿಬರುತ್ತಿರುವ ಸುದ್ದಿಯೊಂದೇ ಬಸವರಾಜ ಬೊಮ್ಮಾಯಿಯವರ ನೂತನ ಸಂಪುಟದಲ್ಲಿ ಯಾರ್ಯಾರು ಸೇರ್ಪಡೆಯಾಗುತ್ತಾರೆ, ಯಾರ್ಯಾರಿಗೆ ಈ ಬಾರಿ ಸಚಿವ ಸ್ಥಾನ ಒಲಿಯುತ್ತದೆ ಎಂದು.

ಜಾತಿ, ಪ್ರದೇಶವಾರು ಪ್ರಾತಿನಿಧ್ಯವನ್ನು ನೋಡಿಕೊಂಡು ಶಾಸಕರಿಗೆ ಹಿಂದಿನ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಣೆ ಹಾಕಲಾಗಿದ್ದು, ಅವರಲ್ಲಿ ಹಲವರಿಗೆ ಈ ಬಾರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಸಂಶಯವಾಗಿದೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಸುಮಾರು 10 ಮಂದಿ ಹಿರಿ-ಕಿರಿಯ ಶಾಸಕರಿಗೆ ಈ ಬಾರಿ ಸಚಿವ ಸ್ಥಾನ ದೊರಕುವುದು ಸಂಶಯವಾಗಿದ್ದು ಈ ಬಾರಿ ಹೊಸ ಮುಖಗಳಿಗೆ ಹೈಕಮಾಂಡ್ ಆದ್ಯತೆ ಕೊಡಲಿದೆ ಎಂದು ಹೇಳಲಾಗುತ್ತಿದೆ.

ಹಿಂದಿನ ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ 34 ಮಂದಿ ಸಚಿವರಿದ್ದರು, 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ನಿಂದ ತೊರೆದು ಬಿಜೆಪಿ ಸೇರಿ ಸರ್ಕಾರ ರಚನೆಗೆ ಸಹಾಯ ಮಾಡಿದ 11 ಮಂದಿ ಶಾಸಕರಿಗೂ ಸಚಿವ ಸ್ಥಾನ ದೊರಕುವುದು ಸಂಶಯ ಎಂದು ಹೇಳಲಾಗುತ್ತಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೂತನ ಸಂಪುದಲ್ಲಿ ಸೇರ್ಪಡೆಯಾಗುವುದಿಲ್ಲ. ಸಿಡಿ ಕೇಸಿನಲ್ಲಿ ಜಲಸಂಪನ್ಮೂಲ ಸಚಿವ ಖಾತೆಗೆ ರಾಜೀನಾಮೆ ಸಲ್ಲಿಸಿದ ರಮೇಶ್ ಜಾರಕಿಹೊಳಿಯವರಿಗೆ ಇನ್ನೂ ಕೇಸ್ ನಲ್ಲಿ ಕ್ಲೀನ್ ಚಿಟ್ ಸಿಕ್ಕಿಲ್ಲ. ಇನ್ನು ಜಗದೀಶ್ ಶೆಟ್ಟರ್ ಅವರು ಅವರಾಗಿಯೇ ನೂತನ ಸಂಪುಟಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿ ಬೆಂಗಳೂರಿನಿಂದ 8 ಮಂದಿ ಶಾಸಕರು ಸಚಿವರಾಗಿದ್ದರು, ಅವರಲ್ಲಿ ಮೂವರಾದ ಎಸ್ ಟಿ ಸೋಮಶೇಖರ್, ಗೋಪಾಲಯ್ಯ ಮತ್ತು ಭೈರತಿ ಬಸವರಾಜು ಜೆಡಿಎಸ್-ಕಾಂಗ್ರೆಸ್ ನಿಂದ ಬಂದವರು. ಈ ಮೂವರಿಗೆ ನೂತನ ಸಂಪುಟದಲ್ಲಿ ಕೂಡ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ಇನ್ನು ಹಿರಿಯರಾದ ಸುರೇಶ್ ಕುಮಾರ್, ವಿ ಸೋಮಣ್ಣ ಮತ್ತು ಆರ್ ಅಶೋಕ್ ಅವರನ್ನು ನೂತನ ಸಂಪುಟದಲ್ಲಿ ಹೊರಗಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನು ಒಂದೂವರೆ ವರ್ಷವಿದೆ. ಹಿಂದಿನ ಬಾರಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದವರಿಗೇ ಈ ಬಾರಿ ಕೂಡ ನೀಡಲು ಸಾಧ್ಯವಾಗುವುದಿಲ್ಲ. ಕಳೆದ ಬಾರಿ ಅವಕಾಶ ವಂಚಿತರಿಗೆ ಈ ಬಾರಿ ಸ್ಥಾನ ನೀಡುವ ಸಾಧ್ಯತೆಯಿದೆ ಎಂದು ಬಿಜೆಪಿ ಆಂತರಿಕ ಮೂಲಗಳು ಹೇಳುತ್ತಿವೆ.

ಆದರೆ ಬಿಜೆಪಿ ಹಿರಿಯ ನಾಯಕರನ್ನು ಸಂಪುಟದಿಂದ ದೂರ ಇಡುವುದು ಪಕ್ಷಕ್ಕೆ ಸವಾಲಿನ ಕೆಲಸ. ಡಾ ಸಿ ಎನ್ ಅಶ್ವಥ ನಾರಾಯಣ ಅವರು ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾದರೂ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದಿಲ್ಲ. ವಲಸಿಗ ಶಿವರಾಮ್ ಹೆಬ್ಬಾರ್ ಅವರನ್ನು ಸಹ ಸಚಿವ ಮಾಡುವುದು ಸಂಶಯ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎ ರಾಮದಾಸ್, ಬಸವನಗುಡಿಯ ರವಿ ಸುಬ್ರಹ್ಮಣ್ಯ ಅವರು ಸುರೇಶ್ ಕುಮಾರ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಹ ಸೇರ್ಪಡೆಯಾಗಬಹುದು.

ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬಹುದಾದರೂ, ರಾಜಕೀಯವಾಗಿ ಪ್ರಬಲವಾದ ಕುರುಬ ಸಮುದಾಯದ ಒತ್ತಡದಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರೂ ಕೇಳಿಬರುತ್ತಿದೆ. ಮೊಟ್ಟೆಯ ವಿತರಣೆಯಲ್ಲಿ ಮಾಜಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧದ ಆರೋಪಗಳು ಈ ಬಾರಿ ಸಂಪುಟದಿಂದ ಅವರನ್ನು ದೂರವಿಡುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಮಾಜಿ ಸಚಿವ ಜೆ.ಸಿ.ಮಧುಸ್ವಾಮಿ ತಮಗೇನು ಗೊತ್ತಿಲ್ಲ, ತಮ್ಮ ಕ್ಷೇತ್ರ ಚಿಕ್ಕನಾಯಕನಹಳ್ಳಿ ಮೇಲೆ ಗಮನ ಹರಿಸುತ್ತಿದ್ದೇನೆ ಎನ್ನುತ್ತಿದ್ದಾರೆ.

ನಾನು 12 ವರ್ಷಗಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗೆ ಸಂಪುಟದಲ್ಲಿ ಸ್ಥಾನ ಕೊಡಿ ಎಂದು ಯಾರನ್ನೂ ಕೇಳಿಕೊಂಡು ಹೋಗುವುದಿಲ್ಲ ಎಂದು ಮಾಜಿ ವಸತಿ ಖಾತೆ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಜೆ ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ವಿ ಸೋಮಣ್ಣ ಅವರು ಸಚಿವರಾಗಿದ್ದರು. ಆಗ ಬಸವರಾಜ ಬೊಮ್ಮಾಯಿಯವರು ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ನಿನ್ನೆ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ವಿ ಸೋಮಣ್ಣ ಮಾತುಕತೆ ನಡೆಸಿದ್ದಾರೆ.

SCROLL FOR NEXT