ರಾಜಕೀಯ

ನನಗೆ ಸಿಎಂ ಸ್ಥಾನ ತಪ್ಪಿಸಿದ್ದೇ ಬಿ ಎಸ್ ಯಡಿಯೂರಪ್ಪ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್!

Sumana Upadhyaya

ವಿಜಯಪುರ: ರಾಜ್ಯ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯಾಗಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದರೂ ಕೂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪನವರ ಮೇಲೆ ಹರಿಹಾಯುವುದನ್ನು ಮಾತ್ರ ನಿಲ್ಲಿಸಿಲ್ಲ.

ನಿನ್ನೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಾಗಿದ್ದನ್ನು ಯಡಿಯೂರಪ್ಪನವರೇ ತಪ್ಪಿಸಿದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ನನ್ನನ್ನು ಮುಖ್ಯಮಂತ್ರಿ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ ಕೆಡವುತ್ತೇನೆ ಎಂದು ಯಡಿಯೂರಪ್ಪನವರು ಬೆದರಿಕೆ ಹಾಕಿದ್ದರಿಂದ ಹೈಕಮಾಂಡ್ ಕೊನೆ ಕ್ಷಣದಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡುವ ಯೋಚನೆಯನ್ನು ಕೈಬಿಟ್ಟರು, ಅಲ್ಲಿಯವರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಮಾತ್ರ ಪರಿಗಣನೆಗೆ ಇದ್ದಿದ್ದು ಎಂದು ನೇರವಾಗಿ ಆರೋಪಿಸಿದ್ದಾರೆ.

ನಾನು ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರನ ಹಗರಣಗಳು ಹೊರಬರುತ್ತವೆ, ಅವರು ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯದಿಂದ ನಾನು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು ಎಂದು ಆರೋಪಿಸಿದರು.

ಮಂತ್ರಿಗಿರಿಗೆ ಲಾಬಿ ಮಾಡಲ್ಲ: ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರದಲ್ಲಿ ಮಂತ್ರಿಯಾಗಿದ್ದವನು ನಾನು, ಆಡಳಿತ ಮಾಡಿದ ಅನುಭವ ನನಗಿದೆ, ಹೈಕಮಾಂಡ್ ಅದಾಗಿಯೇ ನನ್ನನ್ನು ಈ ಬಾರಿ ಸಚಿವ ಸಂಪುಟ ರಚನೆಯಲ್ಲಿ ಪರಿಗಣಿಸಿ ಮಂತ್ರಿ ಸ್ಥಾನ ನೀಡಿದರೆ ಒಪ್ಪುತ್ತೇನೆ, ನಾನಾಗಿಯೇ ಹೋಗಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ಮಾಡಲ್ಲ. ಎಲ್ಲವೂ ಯಡಿಯೂರಪ್ಪನವರು ಹೇಳಿದಂತೆ ಆಗುವುದಿಲ್ಲ, ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.

ಸರ್ಕಾರದಿಂದ ಮುಂದೆ ವಿಜಯಪುರಕ್ಕೆ ಅನ್ಯಾಯವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ, ಸಚಿವ ಸಂಪುಟದಲ್ಲಿ ನಿಷ್ಠಾವಂತರು, ಹಿಂದುತ್ವ ಪ್ರತಿಪಾದಕರು, ಪಕ್ಷದ ಕಾರ್ಯಕರ್ತರು, ಬಿಜೆಪಿ ಕಟ್ಟಿ ಬೆಳೆಸಿದವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಸಹ ಯತ್ನಾಳ್ ಆಗ್ರಹಿಸಿದ್ದಾರೆ.

SCROLL FOR NEXT