ರಾಜಕೀಯ

ಗಂಡ-ಹೆಂಡತಿ ನಡುವೆಯೇ ಅಸಮಾಧಾನವಿರತ್ತೆ, ದೊಡ್ಡ ಪಕ್ಷದಲ್ಲಿ ಇರಲ್ಲ ಅಂದ್ರೆ ಹೇಗೆ? ಸಚಿವ ಸುಧಾಕರ್ ಪ್ರಶ್ನೆ

Raghavendra Adiga

ಬೆಂಗಳೂರು/ಚಿಕ್ಕಬಳ್ಳಾಪುರ: ಗಂಡ ಹೆಂಡತಿಯನಡುವೇ ಜಗಳ, ಅಸಮಾಧಾನಗಳಿರುತ್ತದೆ ಅಂಥದ್ದರಲ್ಲಿ ದೊಡ್ಡ ಪಕ್ಷದಲ್ಲಿ ಅಸಮಾಧಾನ ಇರಬಾರದೆನ್ನಲು ಆಗುವುದೆ? ಪಕ್ಷದಲ್ಲಿನ ಎಲ್ಲಾ ಸಮಸ್ಯೆಗಳಿಗೆ, ಗೊಂದಲಕ್ಕೆ ಅರುಣ್ ಸಿಂಗ್ ತೆರೆ ಎಳೆಯಲಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಸಚಿವ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಜೈನ್ ಮಿಷನ್ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿರುವ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ.

ಮುಂದಿನ ವಾರ ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದು ಸರ್ಕಾರದಲ್ಲಿ, ಬಿಜೆಪಿ ಶಾಸಕರ ನಡುವಿನ ಗೊಂದಲ, ಭಿನ್ನಾಭಿಪ್ರಾಯಗಳಿಗೆ ಪರಿಹಾರ ನೀಡಲಿದ್ದಾರೆ ಎಂದು ಸುಧಾಕರ್ ಹೇಳಿದರು.

"ಸಾಂಸಾರಿಕ ಜೀವನದಲ್ಲಿ ಗಂಡ ಹೆಂಡತಿಯರ ನಡುವೆಯೇ ಅಸಮಾಧಾನಗಳಿರುತ್ತದೆ. ಅಂಥದ್ದರಲ್ಲಿ ದೊಡ್ಡ ಪಕ್ಷದಲ್ಲಿ ಸಮಾಧಾನಗಳಿರಲ್ಲ ಎಂದು ಭಾವಿಸಿದ್ದೀರಾ? " ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.

"ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಅನಗತ್ಯ. ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷ ಮುಖ್ಯಮಂತ್ರಿಗಳೆಂದು ಇದಾಗಲೇ ಅರುಣ್ ಸಿಂಗ್ ಕೂಡ ಸ್ಪಷ್ಟಪಡಿಸಿದ್ದಾರೆ," ಅವರು ಹೇಳಿದರು.

ಸಿದ್ದರಾಮಯ್ಯ ಎಲ್ಲಿಂದಲಾದರೂ ಸ್ಪರ್ಧಿಸಲಿ

ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ಕೇಳಲು ಸಚಿವರು "ನಾನು ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ವರುಣಾ ಕ್ಷೇತ್ರ ಬಿಡಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಆಗ ಕೇಳಿಲ್ಲ, ಈಗವರು ಎಲ್ಲಿಂದಲಾದರೂ ಸ್ಪರ್ಧಿಸಲಿ" ಎಂದರು.

"ರಾಜ್ಯದಲ್ಲಿ ಇದುವರೆಗೆ  1.68 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆ ವಿತರಣೆ ಪಟ್ಟಿಯಲ್ಲಿ ಕರ್ನಾಟಕ  6ನೇ ಸ್ಥಾನದಲ್ಲಿದೆ.  ನಿನ್ನೆ ರಾಜ್ಯಕ್ಕೆ ಮೂರು ಲಕ್ಷ ಡೋಸ್ ಲಸಿಕೆ  ಬಂದಿದೆ. 3 ಕೋಟಿ ಲಸಿಕೆಗೆ ನೀಡಿದ್ದ ಆರ್ಡರ್ ರದ್ದು ಮಾಡುತ್ತೇವೆ, ಲಸಿಕೆ ಕಂಪನಿಗಳಿಗೆ ನೀಡಿದ್ದ ಹಣ ವಾಪಸ್ ಪಡೆಯುತ್ತೇವೆ " ಅವರು ಹೇಳಿದರು.
 

SCROLL FOR NEXT