ರಾಜಕೀಯ

ಕಾಂಗ್ರೆಸ್ ನಲ್ಲಿ ಬಿರುಕು ಹೆಚ್ಚಾಗುತ್ತಿದ್ದಂತೆ 'ಮುಂದಿನ ಸಿಎಂ' ಹೇಳಿಕೆ ನೀಡದಂತೆ ಶಾಸಕರಿಗೆ ಸಿದ್ದು ಕಿವಿಮಾತು

Nagaraja AB

ಬೆಂಗಳೂರು: ವಿಧಾನ ಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಹೀಗಿರುವಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಬಿರುಕಿಗೆ ಕಾರಣವಾಗಿರುವಂತೆಯೇ, 2023ರ ವಿಧಾನಸಭಾ ಚುನಾವಣೆಗಾಗಿ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸದಂತೆ ಪಕ್ಷದ ಶಾಸಕರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಕಿವಿಮಾತು ಹೇಳಿದ್ದಾರೆ.

ಪಕ್ಷದ ನಾಯಕ್ವದ ಆದೇಶದ ಹೊರತಾಗಿಯೂ ಮುಂದೆಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕೆಂದು ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಈ ರೀತಿ ಶಾಸಕರಿಗೆ ಹೇಳಿದ್ದಾರೆ. 

ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಶಾಸಕರನ್ನು ನಿಯಂತ್ರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನಗೆ ಏನು ಗೊತ್ತಿಲ್ಲ, ಮುಂದಿನ ಮುಖ್ಯಮಂತ್ರಿ ಅಂತಾ ಹೇಳಿಲ್ಲ, ಆದರೆ, ಮುಂದಿನ ಮುಖ್ಯಮಂತ್ರಿ ಅಂತಾ ಹೇಳಿಕೆ ನೀಡದಂತೆ ಪಕ್ಷದ ಶಾಸಕರಲ್ಲಿ ಮನವಿ ಮಾಡುತ್ತೇನೆ ಎಂದರು.

ಪಕ್ಷದ ರಾಷ್ಟ್ರೀಯ ನಾಯಕರೊಂದಿಗಿನ ಸಭೆ ನಂತರ ನವದೆಹಲಿಯಿಂದ ವಾಪಸ್ಸಾದ ನಂತರ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕೆಲ ಶಾಸಕರು ನೀಡಿರುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಇದರ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಡಿಕೊಳ್ಳಲಿದ್ದಾರೆ, ಒಂದು ವೇಳೆ ಅವರು ಗಮನಹರಿಸದಿದ್ದಲ್ಲಿ ಪಕ್ಷ ನೋಡಿಕೊಳ್ಳಲಿದೆ ಎಂದು ಹೇಳಿದರು

ಕಾಂಗ್ರೆಸ್ ಶಾಸಕರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್, ರಾಘವೇಂದ್ರ ಹಿಟ್ನಾಳ್, ಜೆ.ಎನ್. ಗಣೇಶ್, ಭೀಮಾ ನಾಯಕ್, ರಾಮಪ್ಪ ಮತ್ತು ಆರ್. ಅಖಂಡ ಶ್ರೀನಿವಾಸ ಮೂರ್ತಿ, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. 

ಇಂತಹ ಹೇಳಿಕೆ ನೀಡದಂತೆ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜಿವಾಲ ಮತ್ತು ಡಿಕೆ ಶಿವಕುಮಾರ್ ಅವರ ಆದೇಶದ ಹೊರತಾಗಿಯೂ ಈ ಶಾಸಕರು ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದಿದ್ದರು, 

ಡಿ. ಕೆ. ಶಿವಕುಮಾರ್ ಸಿಎಂ ಆಗಿದ್ದರೆ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬರುತಿತ್ತು ಎಂದು ಕಳೆದ ತಿಂಗಳು ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವಿಟ್ ನಂತರ ಸಿದ್ದರಾಮಯ್ಯ ಆಪ್ತರು ಎಚ್ಚೆತ್ತುಕೊಂಡಿದ್ದು, ತಮ್ಮ ನೆಚ್ಚಿನ ನಾಯಕನ ಪರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಉಭಯ ನಾಯಕರ ನಡುವಣ ರಾಜಕೀಯ ಮೇಲುಗೈತನ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸಮಸ್ಯೆಯಾಗಬಹುದು ಎಂದು ಪಕ್ಷದ ಮೂಲಗಳು ಹೇಳಿವೆ.

SCROLL FOR NEXT