ರಾಜಕೀಯ

ಸಿಎಂ ಆಗಬೇಕೆಂಬ ಆತುರವಿಲ್ಲ: ಡಿಕೆ.ಶಿವಕುಮಾರ್

Manjula VN

ಬೆಂಗಳೂರು: ನಮ್ಮಲ್ಲಿ ಈಗ ಯಾವ ಕುರ್ಚಿಯೂ ಖಾಲಿ ಇಲ್ಲ. ನಾನು ಮುಖ್ಯಮಂತ್ರಿಯಾಗುವ ಆತುರದಲ್ಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ. 

ಶಾಸಕ ರಾಮಪ್ಪ ಅವರ ಹೇಳಿಕೆಗೆ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಆಗಬೇಕೆಂದು ನಾನು ಯಾವತ್ತಾದರೂ ಹೇಳಿದ್ದೀನಾ? ಯಾರ‍್ಯಾರು ಏನೇನು ಸಲಹೆ ಕೊಡುತ್ತಾರೊ ಕೊಡಲಿ. ಅದನ್ನು ಸ್ವೀಕರಿಸೋಣ ಎಂದು ಹೇಳಿದ್ದಾರೆ. 

ಬಿಜೆಪಿ ಸಮಸ್ಯೆಗೂ, ಕಾಂಗ್ರೆಸ್ ವಿಚಾರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ನಮ್ಮಲ್ಲಿ ಯಾವ ಕುರ್ಚಿಯೂ ಖಾಲಿ ಇಲ್ಲ. ನಮ್ಮ ಪೈಪೋಟಿ ಏನಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಅದಕ್ಕೆ ನಾವು ಸಮಯ ನೀಡಬೇಕು. ಅದನ್ನು ಬಿಟ್ಟು ಬೇರೆ ವಿಚಾರಕ್ಕೆ ಸಮಯ ನೀಡುವುದು ವ್ಯರ್ಥ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಗೆಲುವು ಸಾಧ್ಯ ಎಂದು ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಹೌದಾ..? ಬಹಳ ಸಂತೋಷ’ ಎಂದಷ್ಟೇ ಪ್ರತಿಕ್ರಿಯೆ ನೀಡಿದರು. 

‘ಶಾಸಕರ ಇಂತಹ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಆಗುವುದಿಲ್ಲವೇ’ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ಪಕ್ಷದ ಹೈಕಮಾಂಡ್‌ಗೆ ಏನು ಹೇಳಬೇಕೊ ಅದನ್ನು ಹೇಳಿದ್ದೇನೆ. ಶಾಸಕರ ಹೇಳಿಕೆಗಳನ್ನು ಶಾಸಕಾಂಗ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಅವರು ನೋಡಿಕೊಳ್ಳದಿದ್ದರೆ, ಆ ಬಗ್ಗೆ ಗಮನಹರಿಸಲು ಕಾಂಗ್ರೆಸ್ ಪಕ್ಷ ಬದುಕಿದೆ’ ಎಂದರು.

SCROLL FOR NEXT