ರಾಜಕೀಯ

ಯಡಿಯೂರಪ್ಪನವರು ಬಿಟ್ಟುಕೊಟ್ಟರೆ ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ: ಎಂಟಿಬಿ ನಾಗರಾಜ್

Sumana Upadhyaya

ದೇವನಹಳ್ಳಿ: ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಯಾರಿಗೆ ಇರುವುದಿಲ್ಲ ಹೇಳಿ, ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ ಎಂದು ಪೌರಾಡಳಿತ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.

ದೇವನಹಳ್ಳಿಯಲ್ಲಿ ಮಾತನಾಡಿದ ಅವರು ಬಿ ಎಸ್ ಯಡಿಯೂರಪ್ಪನವರನ್ನು ಬಿಟ್ಟರೆ ನನಗೂ ಸಿಎಂ ಆಗ್ಬೇಕೆಂಬ ಆಸೆ ಇದೆ. ಆಸೆಯಿಲ್ಲದ ಮನುಷ್ಯ ಯಾರೂ ಇಲ್ಲ. ಎಲ್ಲರೂ ಅವರದ್ದೇ ಆದಂತಹ ಒಂದೊಂದು ಆಸೆ ಇಟ್ಟುಕೊಂಡಿರುತ್ತಾರೆ. ಇನ್ನೆರಡು ವರ್ಷಗಳಲ್ಲಿ ಚುನಾವಣೆ ನಡೆಯಲಿದ್ದು ಬಿಜೆಪಿಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಶಾಸಕರಾಗಿ ಬರಬೇಕು. ನಂತರ ಶಾಸಕಾಂಗ ಪಕ್ಷ ಸಭೆ ನಡೆಯುತ್ತದೆ, ಅಲ್ಲಿ ಸಿಎಂ ಯಾರು ಎಂಬ ಬಗ್ಗೆ ತೀರ್ಮಾನವಾಗಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿಯೂ ಅವರವರು ತಾನು ಮುಖ್ಯಮಂತ್ರಿಯಾಗಬೇಕು, ತಮ್ಮ ನಾಯಕರು ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತಿರುತ್ತಾರೆ, ಅದೆಲ್ಲ ಅವರವರ ವೈಯಕ್ತಿಕ ಅಭಿಪ್ರಾಯಗಳಷ್ಟೆ, ಹೇಳಿದಂತೆ, ಅಂದುಕೊಂಡಂತೆ ನಡೆಯುವುದಿಲ್ಲ. ಚುನಾವಣೆ ನಡೆದು ಬಹುಮತ ಬರಬೇಕು ಅಲ್ಲವೇ, ಈಗಲೇ ಮಾತನಾಡುವುದೇಕೆ, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿಕೊಳ್ಳುವುದು ಎನ್ನುವಂತೆ ಈಗಲೇ ಮುಖ್ಯಮಂತ್ರಿ ಬಗ್ಗೆ ಚರ್ಚೆಯೇಕೆ ಎಂದು ಎಂಟಿಬಿ ಪ್ರಶ್ನಿಸಿದ್ದಾರೆ.

SCROLL FOR NEXT