ರಾಜಕೀಯ

3 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: ಬಿಜೆಪಿ-ಕಾಂಗ್ರೆಸ್'ಗೆ ಹೆಚ್ಚಿದ ಟೆನ್ಷನ್!

Manjula VN

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಅಟ್ಟಹಾಸದ ನಡುವೆಯೇ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಭಾನುವಾರ ಆರಂಭವಾಗಲಿದ್ದು, ಪ್ರತಿಷ್ಠೆಯ ಕದನವಾಗಿರುವ ಹಿನ್ನೆಲೆ ಉಪಚುನಾವಣೆಯ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. 

ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಆಯೋಗವು ಕೋವಿಡ್ ಮಾರ್ಗಸೂಚಿಯನ್ವಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಕಲ ಸಿದ್ಥದೆಗಳನ್ನು ಕೈಗೊಂಡಿದೆ. 

ಆಡಳಿತಾರೂಢ ಬಿಜೆಪಿಗೆ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 

ಉಪಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ. ಆದರೆ, ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತದೆ. 

ಬೆಳಗಾವಿ ಲೋಕಸಭಾ ಕ್ಷೇತ್ರವು ಬಿಜೆಪಿಯ ಮುಷ್ಠಿಯಲ್ಲಿದ್ದು, ಕ್ಷೇತ್ರವನ್ನು ಉಳಿಸಿಕೊಳ್ಳುವ ವಿಶ್ವಾಸ ಬಿಜೆಪಿಗೆ ಇದೆ. ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೋವಿಡ್ ನಿಂದ ಮೃತಪಟ್ಟ ಕಾರಣ ಪತ್ನಿ ಮಂಗಳಾ ಅಂಗಡಿ ಬಿಜೆಪಿ ಅಭ್ಯರ್ಥಿಯಾದರೆ, ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್'ನ ಹುರಿಯಾಳಾಗಿದ್ದಾರೆ. 

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳೇ ಇದ್ದು, ಪಕ್ಷವನ್ನು ಅದಲು ಬದಲು ಮಾಡಿಕೊಂಡಿದ್ದಾರೆ. 

ಕಾಂಗ್ರೆಸ್ ನಿಂದ ಹೊರಬಂದ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸನಗೌಡ ತುರ್ವಿಹಾಳ್ ಕಣಕ್ಕಿಳಿದಿದ್ದಾರೆ. 

ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ನಾರಾಯಣ ರಾವ್ ಕೋವಿಡ್ ಸೋಂಕಿನಿಂದಾಗಿ ನಿಧನರಾದ ಕಾರಣ ಅವರ ಪತ್ನಿ ಮಾಲಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ಹೊಸ ಮುಖ ಶರಣು ಸಲಗರ್ ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ಸೈಯದ್ ಅಲಿ ಸ್ಪರ್ಧಿಸಿದ್ದಾರೆ. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸ್ಪರ್ಧಿಸಿದ್ದಾರೆ. 

SCROLL FOR NEXT