ರಾಜಕೀಯ

ಉಪ ಚುನಾವಣಾ ಫಲಿತಾಂಶ: ಬಿಜೆಪಿ ಮತ್ತು ಯಡಿಯೂರಪ್ಪ ನಾಯಕತ್ವಕ್ಕೆ ಸತ್ವ ಪರೀಕ್ಷೆ!

Shilpa D

ಬೆಳಗಾವಿ: ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಗೆ ನಿರ್ಣಾಯಕ ಎಂದೇ ಹೇಳಲಾಗುತ್ತಿದೆ.

ಸಿಎಂ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸುವಂತೆ ಪಕ್ಷದ ಹಲವರು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ, ಹೀಗಾಗಿ ಯಡಿಯೂರಪ್ಪ ನಾಯಕತ್ವಕ್ಕೆ ಇದು ಸವಾಲಿನ ಪ್ರಶ್ನೆಯಾಗಿದೆ.

ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನೆಕ್ ಟು ನೆಕ್ ಫೈಟ್ ಕೊಟ್ಟಿವೆ, ಚುನಾವಣಾ  ಫಲಿತಾಂಶ ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ್ತಷ್ಟು ಪ್ರೇರಣೆಯಾಗಲಿದೆ.

ರಾಜ್ಯದಲ್ಲಿ ತಲೆ ದೋರಿರುವ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಯಡಿಯೂರಪ್ಪ ಮತ್ತವರ ತಂಡ ಹೆಣಗಾಡುತ್ತಿರುವ ಸಂದರ್ಭದಲ್ಲಿ ಈ ಮೂರು ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಸವಾಲಿನ ಪ್ರಶ್ನೆಯಾಗಿದೆ. ಆದರೆ ಮೂರು ಕ್ಷೇತ್ರಗಳಲ್ಲಿ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ಬಿಜೆಪಿ ನಾಯಕರು ಆತ್ಮವಿಶ್ವಾಸದಲ್ಲಿದ್ದಾರೆ.

ಲಿಂಗಾಯತ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿರುವ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರಿಗೆ ಬೆಂಬಲ ನಿಶ್ಚಿತವಾಗಿದೆ,  ಆದರೆ ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದ್ದು ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ನಾಯಕರ ಅಭಿಮತವಾಗಿದೆ.

ತೀವ್ರವಾದ ಕೊರೋನಾ ಅಲೆಯ ನಡುವೆಯೂ ಸಿಎಂ ಬೆಳಗಾವಿಯಲ್ಲಿ ಅಬ್ಬರದ ಪ್ರಚಾರ ಮತ್ತು ರ್ಯಾಲಿ ನಡೆಸಿದ್ದಾರೆ. ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿತ್ತು, ಹೀಗಾಗಿಯೇ ಸಂಸದ ಸುರೇಶ್ ಅಂಗಡಿ 2004 ರಿಂದ ಸತತ ಗೆಲುವು ಸಾಧಿಸಿದ್ದರು.

ಅನುಕಂಪದ ಅಲೆಯ ಮೇಲೆ  ಮತ ಪಡೆಯುವ ದೃಷ್ಟಿಯಿಂದ ಮಂಗಳಾ ಅಂಗಡಿ ಅವರನ್ನು ಕಣಕ್ಕಿಳಿಸಲಾಗಿತ್ತು, ಉಪ ಚುನಾವಣಾ ಫಲಿತಾಂಶ ಹೇಗೆ ಬರುತ್ತದೆ ಎಂಬುದು ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಬಿಎಲ್ ಶಂಕರ್ ಹೇಳಿದ್ದಾರೆ.

ಸರ್ಕಾರದ ಕಾರ್ಯವೈಖರಿಯಿಂದಾಗಿ ಜನ ಬೇಸತ್ತಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

SCROLL FOR NEXT