ರಾಜಕೀಯ

ಮುಖ್ಯಮಂತ್ರಿ ಬದಲಾವಣೆಗೆ ಕೌಂಟ್ ಡೌನ್: ದೆಹಲಿಗೆ ಯೋಗೇಶ್ವರ್, ಬೆಲ್ಲದ್ ದೌಡು; ರಾಜ್ಯ ಬಿಜೆಪಿ ನಾಯಕರ ರಹಸ್ಯ ಸಭೆ!

Shilpa D

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಶುರುವಾದ ಬೆನ್ನಲ್ಲೇ, ರಾಷ್ಟ್ರ ರಾಜಧಾನಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಶನಿವಾರ ಸಂಜೆಯಿಂದಲೇ ಹಲವು ಪ್ರಮುಖ ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ.

ಸೋಮವಾರ ಸಂಜೆ ದೆಹಲಿಗೆ ಬಂದಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಕರ್ನಾಟಕ ಭವನಕ್ಕೆ ಬಾರದೇ ಹೋಟೆಲ್‌ನಲ್ಲಿ ತಂಗಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವ ಅವರು, ರಾಜ್ಯದ ರಾಜಕೀಯ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ-ಧಾರವಾಡ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅರವಿಂದ್ ಬೆಲ್ಲದ್ ಅವರನ್ನು ಮುಂದಿನ ಬಿಜೆಪಿ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ, ಸಚಿವ ಯೋಗೇಶ್ವರ್ ಜೊತೆ ದೆಹಲಿಗೆ ತೆರಳಿರುವ ಬೆಲ್ಲದ್ ಅಲ್ಲಿ ಯಾವುದೇ ಕೇಂದ್ರ ನಾಯಕರನ್ನು ಭೇಟಿ ಮಾಡಲಿಲ್ಲ, ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಬೆಲ್ಲದ್ ಒಂದು ವೇಳೆ ಸಿಎಂ ಹುದ್ದೆ ಖಾಲಿಯಾದರೆ ಅವರೇ ಮುಂದಿನ ಆಯ್ಕೆ ಎಂದು ಹೇಳಲಾಗುತ್ತಿದೆ.

ಗಣಿ ಸಚಿವ ಮುರುಗೇಶ್ ನಿರಾಣಿ ಅವರು ದೆಹಲಿಗೆ ತೆರಳುತ್ತಾರೆ ಎಂಬ ನಿರೀಕ್ಷೆ ಇತ್ತು, ಆದರೆ ಅಂತಿಮ ಕ್ಷಣದಲ್ಲಿ ಯೋಜನೆ ಬದಲಾಗಿದೆ ಎನ್ನಲಾಗಿದೆ. ಗುರುವಾರ ಸಂಪುಟ ಸಭೆ ನಡೆಯಲಿದ್ದು, ಬಿಜೆಪಿ ಪಾಳೆಯದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ನಡುವೆ ಶನಿವಾರ ಸಿಎಂ ಹುದ್ದೆ ಪ್ರಮುಖ ಆಕಾಂಕ್ಷಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರನ್ನು ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಶಾಸಕರಾದ ರಮೇಶ್ ಜಾರಕಿಹೊಳಿ, ಸಚಿವರಾದ ಭೈರತಿ ಬಸವರಾಜ್ ಮತ್ತು ಸುಧಾಕರ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮೊದಲಿಗೆ ತುಮಕೂರಿಗೆ ಭೇಟಿ ನೀಡಿದ್ದ ಸುಧಾಕರ್ ನಂತರ ಚಿತ್ರದುರ್ಗಕ್ಕೆ ತೆರಳಿದರು, ಅವರ ಜೊತೆ ಭೈರತಿ ಬಸವರಾಜ್ ಜೊತೆಯಾದರು. ಇಬ್ಬರು ಸೇರಿ ಶಿಗ್ಗಾವ್ ನಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಂತರ ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಅವರನ್ನು ಭೇಟಿಯಾಗಿದ್ದಾರೆ.

ನಂತರ ನಾಲ್ವರು ರಾತ್ರಿ ಒಟ್ಟಿಗೆ ಭೋಜನ ಮಾಡಿದ್ದಾರೆ. ಅದಾದ ಮರುದಿನ ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

SCROLL FOR NEXT