ರಾಜಕೀಯ

ನಾಯಕತ್ವ ಬದಲಾವಣೆ ಇಲ್ಲ, ಯಡಿಯೂರಪ್ಪ ನಮ್ಮ ಸರ್ವಸಮ್ಮತ ನಾಯಕ: ನಳಿನ್ ಕುಮಾರ್ ಕಟೀಲು

Sumana Upadhyaya

ಬೆಂಗಳೂರು: ಸರ್ಕಾರದಲ್ಲಿ ಮುಖ್ಯಮಂತ್ರಿ ನಾಯಕತ್ವ ಬದಲಾವಣೆ ಇಲ್ಲ, ಯಡಿಯೂರಪ್ಪನವರು ನಮ್ಮ ಸರ್ವಸಮ್ಮತ ನಾಯಕರು, ಇನ್ನೆರಡು ವರ್ಷಗಳ ಕಾಲ ಸರ್ಕಾರದ ಅವಧಿ ಮುಗಿಯುವವರೆಗೂ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಕೋವಿಡ್ ಸೋಂಕು ತಡೆಗಟ್ಟುವುದೇ ಬಿಜೆಪಿ ನಾಯಕರ ಪ್ರಮುಖ ಆದ್ಯತೆ. ಸಚಿವರು, ಶಾಸಕರಿಗೆಲ್ಲಾ ಅದುವೇ ಸದ್ಯಕ್ಕೆ ಪ್ರಧಾನ ವಿಷಯವಾಗಬೇಕು. ಅದು ಬಿಟ್ಟು ಬೇರೆ ವಿಚಾರಗಳ ಕಡೆಗೆ ಗಮನ ಕೊಡಬಾರದು ಎಂದು ನಾನು ಮತ್ತೊಮ್ಮೆ ಸ್ಪಷ್ಟವಾಗಿ ಸೂಚನೆ ನೀಡುತ್ತೇನೆ. ಈ ಹಿಂದೆಯೂ ನಾನು ಶಾಸಕರಿಗೆ ಇದನ್ನೇ ಹೇಳಿದ್ದೆ ಎಂದರು.

ಕೋವಿಡ್ ಎರಡನೇ ಅಲೆ ಸಾಂಕ್ರಾಮಿಕ ರಾಜ್ಯದ ಮುಂದಿರುವ ಬಹಳ ದೊಡ್ಡ ಸಮಸ್ಯೆಯಾಗಿದ್ದು ಅದು ಮುಗಿಯುವವರೆಗೆ ಬೇರೇನೂ ವಿಚಾರಗಳ ಬಗ್ಗೆ ಮಾತನಾಡುವ ಹಾಗಿಲ್ಲ. ಬಿಜೆಪಿ ಶಾಸಕಾಂಗ ಪಕ್ಷ ಸಭೆ ಕೂಡ ನಡೆಯುವುದಿಲ್ಲ ಎಂದು ಕಟೀಲ್ ತಿಳಿಸಿದರು.

ಸಚಿವ ಯೋಗೇಶ್ವರ್ ಅವರಲ್ಲಿ ವಿವರ ಕೇಳುತ್ತೇನೆ: ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಲ್ಲ, ಯಡಿಯೂರಪ್ಪ ನಾಯಕತ್ವ ಬಗ್ಗೆ ಸಚಿವರು ಪ್ರಶ್ನೆಯೆತ್ತಿದ್ದಾರೆ, ದೆಹಲಿಗೆ ಹಲವು ಸಚಿವರು ಹೋಗಿ ಬಂದಿದ್ದಾರೆ ಎಂಬ ಬಗ್ಗೆ ಸುದ್ದಿಯಾಗಿತ್ತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್, ಇದು ಮೂರು ಪಕ್ಷದ ಹೊಂದಾಣಿಕೆಯ ಸರ್ಕಾರ ಎಂದು ಹೇಳಿದ್ದರು, ಈ ಹೇಳಿಕೆ ಈಗ ವ್ಯಾಪಕ ಸುದ್ದಿಯಾಗುತ್ತಿದ್ದು, ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿದೆ. ಹೈಕಮಾಂಡ್ ಸಿಎಂ ಕುರ್ಚಿಯಿಂದ ಯಡಿಯೂರಪ್ಪನವರನ್ನು ಕೆಳಗಿಳಿಸುತ್ತದೆಯೇ ಎಂದು ಮತ್ತೊಮ್ಮೆ ಚರ್ಚೆಯಾಗುತ್ತಿದೆ. 

ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರನ್ನು ಕೇಳಿದಾಗ, ಇಂದು ಸಚಿವ ಯೋಗೇಶ್ವರ್ ಅವರಲ್ಲಿ ವಿವರಣೆ ಕೇಳುತ್ತೇನೆ, ಯಾವ ಕಾರಣಕ್ಕಾಗಿ, ಯಾವ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದಾರೆ, ಅವರು ಈ ಹೇಳಿಕೆ ನೀಡಲು ಕಾರಣವೇನೆಂದು ಕೇಳುತ್ತೇನೆ ಎಂದು ತಿಳಿಸಿದ್ದಾರೆ.

SCROLL FOR NEXT