ರಾಜಕೀಯ

ದಲಿತ ನಾಯಕ ಪರಮೇಶ್ವರ್ ಸೋಲಿಸಿದ್ದು‌ ಯಾರು? ಮಹಾದೇವಪ್ಪ ಅವರನ್ನು ದೂರವಿಟ್ಟಿದ್ದು ಹೊಟ್ಟೆಪಾಡಿಗಾಗಿಯೇ?

Shilpa D

ಬೆಂಗಳೂರು: ರಾಜ್ಯದಲ್ಲಿ ದಲಿತ ಸಿಎಂ ಪರ-ವಿರೋಧ ಚರ್ಚೆಗಳು ಮುನ್ನಲೆಗೆ ಬಂದಿದೆ, ಇದೇ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ದಲಿತ ವಿರೋಧಿ ಸಿದ್ದರಾಮಯ್ಯ ಎಂದು ಬಿಜೆಪಿ ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಮಾನ್ಯ ಸಿದ್ದರಾಮಯ್ಯನವರೇ‌, ದಲಿತ ನಾಯಕ ಡಾ. ಮಹಾದೇವಪ್ಪ ಅವರನ್ನು ದೂರವಿಟ್ಟಿದ್ದು ಹೊಟ್ಟೆಪಾಡಿಗಾಗಿಯೇ? ದಲಿತ ನಾಯಕ ಪರಮೇಶ್ವರ್‌ ಅವರ ಏಳಿಗೆ ಸಹಿಸದ್ದು ಹೊಟ್ಟೆಪಾಡಿನ ಕಾರಣಕ್ಕಾಗಿಯೇ? ಈಗ ನೀವು ದಲಿತ ಪರ ಹೇಳಿಕೆ ನೀಡುತ್ತಿರುವುದೂ ಹೊಟ್ಟೆಪಾಡಿಗಾಗಿಯೇ? ಎಂದು ಪ್ರಶ್ನಿಸಿದೆ.

ನೀವು ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿದ್ದು ಹೊಟ್ಟೆಪಾಡಿಗಾಗಿಯೇ? ಮಲ್ಲಿಕಾರ್ಜುನ ಖರ್ಗೆ ಅವರನ್ನು ನೀವು ಪಿತೂರಿ ನಡೆಸಿ ದೆಹಲಿಗೆ ಸಾಗಹಾಕಿದ್ದು ಹೊಟ್ಟೆಪಾಡಿಗಾಗಿಯೇ?

ಸಿದ್ದರಾಮಯ್ಯನವರೇ, ದಲಿತ ಪರ ಕಾಳಜಿ ಮೆರೆದಿದ್ದೀರಲ್ಲವೇ? ಹಾಗಾದರೆ, ಕೊರಟಗೆರೆಯಲ್ಲಿ ದಲಿತ ನಾಯಕ ಡಾ.ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದು‌ ಯಾರು? ಮುಖ್ಯಮಂತ್ರಿಯಾಗುವುದಕ್ಕೆ ಪರಮೇಶ್ವರ್‌ ಅವರು ಅಡ್ಡಿಯಾಗುತ್ತಾರೆ ಎನ್ನುವ ಕಾರಣಕ್ಕೆ ನೀವೇ ಸೋಲಿಸಿದ್ದಲ್ಲವೇ? ಸತ್ಯದರ್ಶನ ಮಾಡಿಸುವಿರಾ ಸಿದ್ದರಾಮಯ್ಯ?

ಸಿದ್ದರಾಮಯ್ಯನವರಿಗೆ ದಲಿತರು ಎಂದರೆ ಕೇವಲ ಮತಬ್ಯಾಂಕ್. ಈ ಕಾರಣಕ್ಕಾಗಿಯೇ ನಮ್ಮ ಸರ್ಕಾರವಿದ್ದಾಗ ದಲಿತ ಸಮುದಾಯದ ಅಭಿವೃದ್ಧಿಗೆ ಹಣ ನೀಡಿದ್ದೇನೆ ಎಂದು ಹೇಳುತ್ತಾರೆ. ಅಂತರ್ಯದಲ್ಲಿ ದಲಿತ ನಾಯಕರನ್ನು ತುಳಿದು ಅಧಿಕಾರಕ್ಕೆ ಏರುತ್ತಾರೆ. ಸಿದ್ದರಾಮಯ್ಯ ಅವರದು ಬಣ್ಣದ ತಗಡಿನ ತುತ್ತೂರಿ.

ಎಷ್ಟು ಬಾರಿ ಹಳೆ ಕತೆ ಹೇಳುತ್ತೀರಿ ಸ್ವಾಮಿ? ಜನ ಹೊಸದನ್ನು ಬಯಸುತ್ತಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಂದೆ ನಿಂತು "ದಲಿತರನ್ನು ಮುಖ್ಯಮಂತ್ರಿ" ಮಾಡುತ್ತೇನೆ ಎಂದು ಹೇಳಿ ನೋಡೋಣ. ಆಗ ನಿಮ್ಮ ದಲಿತ ಪ್ರೇಮವನ್ನು ಒಪ್ಪಿಕೊಳ್ಳೋಣ. ತಾನೊಬ್ಬ ಅಹಿಂದ ನಾಯಕ ಎಂದು ಅಧಿಕಾರಕ್ಕೆ ಬಂದ ಮೇಲೆ ದಲಿತ ಸಮುದಾಯದ ಪರವಾಗಿ ಕೆಲಸ ಮಾಡುವುದು ನಿಮ್ಮ ಕರ್ತವ್ಯ. ಅದರಲ್ಲಿ ಹೆಚ್ಚುಗಾರಿಕೆ ಮೆರೆಯುವ ಅಗತ್ಯವಿಲ್ಲ. ನಾನೇ ಮಾಡಿದ್ದು ಎಂದು ಬೀಗುವಾಗ ಹತ್ತು ಬಾರಿ ಯೋಚಿಸಿ ಎಂದು ಬಿಜೆಪಿ ಟೀಕಿಸಿದೆ.

SCROLL FOR NEXT