ರಾಜಕೀಯ

ಮಕ್ಕಳಿಗೆ 'ಆಯಕಟ್ಟಿನ' ಕ್ಷೇತ್ರಗಳಲ್ಲಿ ಟಿಕೆಟ್: ಸಿದ್ದರಾಮಯ್ಯ ಮುಂದೆ ಹಿರಿಯ ನಾಯಕರ ದುಂಬಾಲು!

Shilpa D

ಬೆಂಗಳೂರು:  ಇತ್ತೀಚೆಗೆ ನಡೆದ ಹಾನಗಲ್ ಮತ್ತು ಸಿಂದಗಿ ವಿಧಾನಸಬೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ, 2023ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನುಕಣಕ್ಕಳಿಸಲು ಹಲವು ಹಿರಿಯ ನಾಯಕರಿಗೆ ಪ್ರೇರಣೆ ನೀಡಿದೆ.

ಜೆಡಿಎಸ್ ನಿಂದ ಹೀಗಾಗಲೇ ಒಂದು ಕಾಲು ಹೊರಗಿಟ್ಟಿರುವ ಜಿಟಿ ದೇವೇಗೌಡ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ, ಸಿದ್ದರಾಮಯ್ಯ ಜೊತೆ ಹೊಂದಿದ್ದ ಶತೃತ್ವ ಮರೆತಿರುವ ಜಿಟಿ ದೇವೇಗೌಡ ಮಗ  ಜಿಡಿ ಹರೀಶ್ ಗೌಡರಿಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸ್ನೇಹಿತರಾಗಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಂಡಿದ್ದರು. ಮುಂಬರುವ ವಿಧಾನಸಭೆ ಚುನಾವಣೆ ಗಮನ ದಲ್ಲಿರಿಸಿಕೊಂಡಿರುವ ದೇವೇಗೌಡರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿರುವುದನ್ನು ರಾಜಕೀಯ ಪಂಡಿತರು ಗಮನಿಸಿದ್ದಾರೆ.

ಜೆಡಿಎಸ್‌ನ ಹಿರಿಯ ನಾಯಕ ಸಾ.ರಾ.ಮಹೇಶ್‌ ಪ್ರತಿನಿಧಿಸುವ ಕೆ.ಆರ್‌.ನಗರ ಕ್ಷೇತ್ರದಿಂದ ಪುತ್ರ ಹರೀಶ್‌ಗೆ ಟಿಕೆಟ್‌ ಕೇಳಿದಾಗ ಜೆಡಿಎಸ್ ನಾಯಕರು ನಿರಾಕರಿಸಿದ್ದಾರ, ಇದರಿಂದಾಗಿ ಜಿ.ಟಿ ದೇವೇಗೌಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

2018ರಲ್ಲಿ ತುಮಕೂರು ಜಿಲ್ಲೆಯ ಸಿ.ಎನ್.ಹಳ್ಳಿ ಕ್ಷೇತ್ರದಿಂದ ಕಿರಿಯ ಪುತ್ರ ಸಂತೋಷ್ ಸೋತ ನಂತರ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೂಡ ತಮ್ಮ ಹಿರಿಯ ಮಗ ಸಂಜಯ್‌ಗೆ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಕೆಎನ್ ರಾಜಣ್ಣಕೂಡ ತಮ್ಮ ಪುತ್ರನಿಗೆ ಸ್ಥಾನ ಕಲ್ಪಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಟಿಬಿ ಜಯಚಂದ್ರ ಮತ್ತು ರಾಜಣ್ಣ ತಮ್ಮ ಮಕ್ಕಳಿಗೆ ಆಯಕಟ್ಟಿನ ಕ್ಷೇತ್ರಗಳಲ್ಲಿ ಸ್ಥಾನ ಕಲ್ಪಿಸಲು ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ.

75 ವರ್ಷ ದಾಟಿದ ತಮ್ಮ ಪಕ್ಷದ ಸದಸ್ಯರನ್ನು ಚುನಾವಣೆಗೆ ಸ್ಪರ್ಧಿಸದಂತೆ ಬಿಜೆಪಿ ನಿರ್ಬಂಧಿಸಿದೆ. ಮತ್ತು ಅವರ ಕುಟುಂಬ ಸದಸ್ಯರನ್ನು ಪ್ರಮೋಟ್  ಮಾಡುವುದಕ್ಕೆ ಬ್ರೇಕ್ ಹಾಕಿದೆ. ಹೀಗಾಗಿ 2023 ರ ವಿಧಾನಸಭಾ ಚುನಾವಣೆಗೆ ಮುನ್ನ ಅನೇಕ ನಾಯಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಸಗೀರ್ ಅಹ್ಮದ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

SCROLL FOR NEXT