ರಾಜಕೀಯ

''ನನ್ನನ್ನು ಪೇಪರ್ ಸಿಂಹ ಎಂದು ಕರೆಯುವ ಮರಿ ಖರ್ಗೆ ಹೆಸರಿನಲ್ಲಿ ಅವರು ಗಂಡಾ-ಹೆಣ್ಣಾ ಎಂದು ಗೊತ್ತಾಗುವುದಿಲ್ಲ":ಸಂಸದ ಪ್ರತಾಪ್ ಸಿಂಹ ಲೇವಡಿ

Sumana Upadhyaya

ಮೈಸೂರು: ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಮಾತಿಗೆ ತಿರುಗೇಟು ನೀಡಿದ್ದಾರೆ. 

ಪ್ರಿಯಾಂಕ್ ಖರ್ಗೆ ಹೆಸರಿನಲ್ಲಿ ಗಂಡೋ-ಹೆಣ್ಣೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ, ಮರಿ ಖರ್ಗೆ ಹೆಸರಿನಲ್ಲಿ ಯಾವುದೇ ಸ್ವಂತಿಕೆಯಿಲ್ಲ, ರಾಜೀವ್ ಗಾಂಧಿ ಮಗಳ ಹೆಸರನ್ನು ನೀವು ಇಟ್ಟುಕೊಂಡಿದ್ದೀರಾ ಎಂದು ವ್ಯಂಗ್ಯವಾಡಿರುವ ಪ್ರತಾಪ್ ಸಿಂಹ ಶೋಷಿತರ ಹೆಸರು ಹೇಳಿ ಮರಿ ಖರ್ಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿ ಬರ್ತಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದಿದ್ದಾರೆ.

ನನ್ನನ್ನು ಪೇಪರ್ ಸಿಂಹ ಎಂದು ಕರೆದರೆ ನನಗೆ ಏನೂ ಅನಿಸುವುದಿಲ್ಲ, ಪತ್ರಿಕೆ ಮೂಲಕವೇ ಗುರುತಿಸಿಕೊಂಡು ನಾನು ಮೈಸೂರು-ಕೊಡಗಿನಂತಹ ಕಷ್ಟದ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಸಂಸದನಾಗಿದ್ದೇನೆ. ನನ್ನ ಪ್ರಾಮಾಣಿಕ ಬರವಣಿಗೆ ಮೂಲಕ ಕಷ್ಟಪಟ್ಟು ಮೇಲೆ ಬಂದು ನಾನು ಈ ಸ್ಥಾನಕ್ಕೆ ಏರಿದ್ದೇನೆ. ಆದರೆ ನನ್ನನ್ನು ಪೇಪರ್ ಸಿಂಹ ಎಂದು ಕರೆಯುವ ಮರಿ ಖರ್ಗೆಯವರ ಹೆಸರಿನಲ್ಲಿ ಅವರು ಹೆಣ್ಣಾ, ಗಂಡಾ ಎಂದು ಗೊತ್ತಾಗುವುದಿಲ್ಲ ಎಂದು ಲೇವಡಿ ಮಾಡಿದರು.

ಕಲಬುರಗಿಯಲ್ಲಿ ರಾಜಕೀಯ ಮಾಡಿ ಮಲ್ಲಿಕಾರ್ಜುನ ಖರ್ಗೆಯವರು ಬಾಬುರಾವ್ ಚಿಂಚನಸೂರ ಮತ್ತು ಇತರ ಕೆಲವು ನಾಯಕರನ್ನು ಮೂಲೆಗುಂಪು ಮಾಡಿ ತಮ್ಮ ಮಗನಿಗೆ ಮಂತ್ರಿಸ್ಥಾನ ಕೊಡಿಸಿದರು. ಬಡವರು, ಶೋಷಿತರು, ದಲಿತರು, ತುಳಿತಕ್ಕೊಳಗಾದವರು ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ನಾಲ್ಕು ನಾಲ್ಕು ಮನೆ ಕಟ್ಟಿಸಿಕೊಂಡು ಐಷಾರಾಮಿ ಕಾರುಗಳನ್ನಿಟ್ಟುಕೊಂಡು ಓಡಾಡುವವರು ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆಯನ್ನು ಕೇಳಿದಂತೆ ನನಗೆ ಭಾಸವಾಗುತ್ತಿದೆ ಎಂದು ಆರೋಪಿಸಿದರು.

SCROLL FOR NEXT