ರಾಜಕೀಯ

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಕಾಂಗ್ರೆಸ್ ಆಗ್ರಹ

Manjula VN

ಬೆಂಗಳೂರು: ರಾಜ್ಯದಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮೇರೆ ಮೀರಿ, ಆಡಳಿತ ಯಂತ್ರ, ಸಾಂವಿಧಾನಿಕ ಯಂತ್ರ ಕುಸಿದು ಬಿದ್ದಿದ್ದು ಕೂಡಲೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಆಗ್ರಹಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಎಕ. ಶಿವಕುಮಾರ್ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮತ್ತು ಪರಿಷತ್ ನಾಯಕ ಎಸ್ ಆರ್ ಪಾಟೀಲ್ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಸರ್ಕಾರ ವಜಾ ಮಾಡಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿದೆ.

ಇದೇ ವೇಳೆ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳ ಅಂದಾಜು ವೆಚ್ಚದ ಶೇ.40ರಷ್ಟು ಮೊತ್ತವನ್ನು ಸರ್ಕಾರದ ಸಚಿವರು, ಅಧಿಕಾರಿಗಳಿಗೆ ಕಮಿಷನ್ ರೂಪದಲ್ಲಿ ನೀಡಬೇಕು ಎಂದು ಖುದ್ದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಜುಲೈ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರವೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ ಕೇಂದ್ರ ಸರ್ಕಾರದ ಪಾಲೂ ಇದೆ ಎಂದು ಭಾವಿಸಬೇಕಾಗುತ್ತದೆ.

ಹೀಗಾಗಿ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಸುಪ್ರೀಂ ಕೋರ್ಟ್'ನ ಹಾಲಿ ನ್ಯಾಯಮಯೂರ್ತಿಗಲ ನೇತೃತ್ವದಲ್ಲಿ ಸಮಿತಿ ರಚಿಸಿ ಭ್ರಷ್ಟಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆವಹಿಸಬೇಕು ಎಂದು ಮನವಿ ಮಾಡಿದೆ.

ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಗುತ್ತಿಗೆದಾರರ ಸಂಘವು ಪತ್ರದಲ್ಲಿ ಹಲವು ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದೆ. “ನಾವು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ರಾಜ್ಯ ಮುಖ್ಯ ಕಾರ್ಯದರ್ಶಿಯಿಂದ ವಿಚಾರಣೆ ನಡೆಸಿದರೆ ಸತ್ಯಾಂಶ ಹೊರಬರುವುದಿಲ್ಲ ಎಂದು ಹೇಳಿದ್ದಾರೆ.

ಡಿಕೆ. ಶಿವಕುಮಾರ್ ಮಾತನಾಡಿ, ‘ಕಾಮಗಾರಿ ಪಡೆಯಲು ಶೇ.40ರಷ್ಟು ಕಮಿಷನ್ ನೀಡಬೇಕು’ ಎಂದು ಸಂಘವು ಆರೋಪಿಸಿದ್ದು, ಪ್ರಕರಣ ಗಂಭೀರವಾಗಿದ್ದು, ರಾಜ್ಯದ ಘನತೆಗೆ ಧಕ್ಕೆ ತಂದಿದೆ. ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ದಾಳಿಗಳು ಭ್ರಷ್ಟಾಚಾರ ಮಿತಿಮೀರಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷವು ಇದರ ವಿರುದ್ಧ ಹೋರಾಟವನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.

ಯೋಜನೆಗಳ ಅಂದಾಜನ್ನು ಹೆಚ್ಚಿಸಲಾಗಿದ್ದು, ಕೆಲವು ಪ್ರಕರಣಗಳಲ್ಲಿ 100 ಕೋಟಿ ರೂ.ನಿಂದ 200 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಮತ್ತು ಅದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿವೆ ಎಂದರು.

SCROLL FOR NEXT