ರಾಜಕೀಯ

2023 ಚುನಾವಣೆ ಮೇಲೆ ಜೆಡಿಎಸ್ ಕಣ್ಣು: ಸಹೋದರರಿಂದ ರಾಜ್ಯದೆಲ್ಲೆಡೆ ಪಕ್ಷ ಸಂಘಟಣೆ; ಸದಸ್ಯತ್ವ ನೋಂದಣಿಗೆ ಮೊಬೈಲ್ ಆ್ಯಪ್

Shilpa D

ಬೆಂಗಳೂರು: ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಯುವಪಡೆಯನ್ನು ಬಲವಾಗಿ ಸಂಘಟಿಸಿ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದಾಗಿ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಘೋಷಿಸಿದರು.

ಬಿಡದಿಯ ತೋಟದ ಮನೆ ಆವರಣದಲ್ಲಿ ನಡೆಯುತ್ತಿರುವ ಜನತಾ ಪರ್ವ 1.0 ಹಾಗೂ ಮಿಷನ್‌-123 ನಾಲ್ಕನೇ ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ನಂತರ ಯುವ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಆ್ಯಪ್ ಮೂಲಕ ಸದಸ್ಯತ್ವ ಅಭಿಯಾನ ಆರಂಭಿಸಲು ಪಕ್ಷ ಚಿಂತನೆ ನಡೆಸಿದೆ. ಮೊಬೈಲ್ ಆ್ಯಪ್ ಮೂಲಕ ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಎಚ್,ಡಿ ಕುಮಾರಸ್ವಾಮಿ ತಿಳಿಸಿದರು.

ಪಕ್ಷಕ್ಕೆ ಸೇರಬಯಸುವರು ಆ್ಯಪ್ ಡೌನ್ ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದಾಗಿದೆ, ಸದಸ್ಯತ್ವ ಅಭಿಯಾನದಲ್ಲಿ ಯಾರೂ ಹೊರಹೋಗುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಪಕ್ಷದ ಶಾಸಕಾಂಗ ನಾಯಕ ಎಚ್‌.ಡಿ. ಕುಮಾರಸ್ವಾಮಿ ‘ಈ ಇಬ್ಬರೂ ಯುವ ನಾಯಕರು ಜೊತೆಗೂಡಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶೇ 25ರಷ್ಟು ಸೀಟುಗಳನ್ನು ಯುವಜನರಿಗೆ ಮೀಸಲಿಡಬೇಕು ಎಂದು ನಿಖಿಲ್‌ ಕೋರಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತೇವೆ’ ಎಂದರು. 

ಪಕ್ಷವು ಪಂಚರತ್ನ ಎಂಬ ಐದು ಪಟ್ಟು ಯೋಜನೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ, ಪಕ್ಷವು ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅನುಕೂಲವಾಗುವಂತೆ ಇದನ್ನು ಜಾರಿಗೆ ತರಲಾಗುವುದು. ಜಲ ಸಂಪನ್ಮೂಲ ಯೋಜನೆಗಳು ರಾಜ್ಯದ ಜೀವನಾಡಿಯಾಗಿದ್ದು, ಪಕ್ಷದ ಸಭೆಯಲ್ಲಿ ನಾವು ಈ ವಿಷಯವನ್ನು ಚರ್ಚಿಸಿದ್ದೇವೆ. ಈ ಯೋಜನೆಗಳು ಹಣ ಮಾಡುವ ಯೋಜನೆಗಳು ಆಗಿರಬಾರದು ಎಂದು ಕುಮಾರಸ್ವಾಮಿ ಹೇಳಿದರು.

SCROLL FOR NEXT