ರಾಜಕೀಯ

ಕಾಂಗ್ರೆಸ್ ಮಾತ್ರ ಹಿಂದುಳಿದ ಜಾತಿಗಳಿಗೆ ಅಧಿಕಾರ ಕೊಟ್ಟಿದೆ: ಡಿಕೆ ಶಿವಕುಮಾರ್

Srinivasamurthy VN

ಬೆಂಗಳೂರು: ಕಾಂಗ್ರೆಸ್ ಮಾತ್ರ ಹಿಂದುಳಿದ ಜಾತಿಗಳಿಗೆ ಅಧಿಕಾರ ಕೊಟ್ಟಿದ್ದು,  ಪ್ರತಿಯೊಬ್ಬರಿಗೂ ಅವರದೇ ಆದ ಅವಕಾಶ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ಗಾಣಿಗ ಸಮುದಾಯದ ಜತೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಜತೆಗೂಡುವುದು ಆರಂಭ, ಜತೆಯಾಗಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಶ್ರಮದ ಸಂಸ್ಕೃತಿಯ ಪ್ರತೀಕವೇ ಗಾಣಿಗ ಸಮುದಾಯ. ನಾವು ಯಾರೂ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಆದರೆ ಜಾತಿಯನ್ನು ನಾವು ಬಿಟ್ಟರೂ, ಅದು ನಮ್ಮನ್ನು ಬಿಡುವುದಿಲ್ಲ ಎಂದು ಹೇಳಿದರು.

ಮಗು ಹುಟ್ಟಿದಾಗ ಅದರ ನಾಮಕರಣದಿಂದಲೇ ಧರ್ಮ ಆರಂಭವಾಗುತ್ತದೆ. ಕೆಲವರು ಪ್ರೀತಿ ಮಾಡಿ ಅಂತರ್ ಜಾತಿ ವಿವಾಹ ಆಗುತ್ತಾರೆ. ರಿಜಿಸ್ಟರ್ ಮದುವೆ ಆಗುತ್ತಾರೆ. ಒಬ್ಬೊಬ್ಬರು ಒಂದೊಂದು ಸಂಪ್ರದಾಯದಲ್ಲಿ ಮದುವೆ ಆಗುತ್ತಾರೆ. ನಾವು ಜಾತಿ, ಧರ್ಮ ನಂಬುವುದಿಲ್ಲ ಎಂದು ಹೇಳಿದರೂ ಸತ್ತ ನಂತರ ದೇಹ ಮಣ್ಣು ಮಾಡಬೇಕಾ, ಸುಡಬೇಕಾ ಎಂದು ಆಯಾ ಜಾತಿಯವರು ನಿರ್ಣಯ ಕೈಗೊಳ್ಳುತ್ತಾರೆ. ಹೀಗೆ ನಾವು ಜಾತಿ ಬಿಟ್ಟರೂ, ಅದು ನಮ್ಮನ್ನು ಬಿಡುವುದಿಲ್ಲ. ಹೀಗಾಗಿ ನಿಮಗೆ ಯಾವುದೇ ಹಿಂಜರಿಕೆ ಬೇಡ. ಡಿವಿಜಿ ಅವರು ಹೇಳಿದಂತೆ ಪ್ರತಿಯೊಬ್ಬರಿಗೂ ಅವರದೇ ಆದ ಅವಕಾಶ ಸಿಗುತ್ತದೆ. ಅದನ್ನು ಬಳಸಿಕೊಳ್ಳಬೇಕು. ಸಮಾಜದಲ್ಲಿ ಶುಭ ಕಾರ್ಯ ಮಾಡಲು, ಭಕ್ತ ಹಾಗೂ ಭಗವಂತನ ನಡುವೆ ನೇರ ಸಂಬಂಧ ಬೆಳೆಸಲು ಗಾಣಿಗ ಉದ್ಭವವಾದ. ಇದು ಇತಿಹಾಸದಲ್ಲಿ ಬಂದ ವೃತ್ತಿ. ನಮ್ಮದು ಸಣ್ಣ ಸಮಾಜ ಎಂಬ ಅಳುಕು ಬೇಡ. ನಮಗೆ ಮುಖ್ಯವಾಗಿ ಬೇಕಿರುವುದು ಮಾನವೀಯತೆ ಹಾಗೂ ಮಾನವಧರ್ಮ. ಅದರಲ್ಲಿ ನಿಮ್ಮ ಪವಿತ್ರ ಪಾತ್ರ ಇದೆ. ನಾನು ಇಂದು ಭಾಷಣ ಮಾಡಲು ಬಂದಿಲ್ಲ. ನಾನು ನಿಮ್ಮ ಧ್ವನಿಯಾಗಿ, ನಿಮ್ಮ ಸಮಸ್ಯೆ ತಿಳಿಯಲು ಬಂದಿದ್ದೇನೆ ಎಂದು ಹೇಳಿದರು.

ಅಂತೆಯೇ 'ಮುಂದೆ ರಾಜ್ಯದಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತೀರಿ. ದೇವರಾಜ ಅರಸು ಅವರು ನಿಮ್ಮ ಕಲ್ಯಾಣಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸಬೇಕು ಎಂದು ಕೇಳಲು ಬಂದಿದ್ದೇನೆ. ನಾನು ಕೇವಲ ನಿಮ್ಮನ್ನು ಮಾತ್ರ ಭೇಟಿ ಮಾಡಿಲ್ಲ. ಮಂಗಳೂರಿನಲ್ಲಿ ಮೀನುಗಾರರು, ದಾವಣಗೆರೆ, ಶಿವಮೊಗ್ಗದಲ್ಲಿ ಲಂಬಾಣಿಗಳು, ಪರಿಶಿಷ್ಟರು, ನೇಕಾರರು ಅದೇ ರೀತಿ ಬೆಂಗಳೂರಲ್ಲಿ ತಿಗಳರು, ಮಡಿವಾಳರು ಸೇರಿದಂತೆ ರಾಜ್ಯದ ವಿವಿಧೆಡೆ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು, ಸಮಾಜದ ಅಭಿವೃದ್ಧಿಗೆ ತ್ಯಾಗ ಮಾಡಿಕೊಂಡು ಬಂದಿರುವವರನ್ನು ಭೇಟಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿ ಇರುತ್ತದೆ. ನಿಮ್ಮಲ್ಲಿ ಕೊರತೆ ಇದೆ ಎಂದು ಯಾವತ್ತಿಗೂ ಭಾವಿಸಬೇಡಿ. ನಿಮ್ಮದು ವೈಯುಕ್ತಿಕ ಉದ್ಯೋಗ ಮಾಡಿದ ಸಮಾಜ ಅಲ್ಲ. ಗಾಣಿಗರು ಎಂದರೆ ನಾಲ್ಕು ಜನಕ್ಕೆ ಉದ್ಯೋಗ ಕೊಟ್ಟವರು. ನೀವು ಉದ್ಯೋಗಿಗಳಾಗಬೇಡಿ, ಉದ್ಯೋಗ ನೀಡುವವರಾಗಿ. ನಿಮ್ಮಲ್ಲಿ ಆ ಶಕ್ತಿ ಇದೆ. ನಿಮ್ಮ ರಕ್ತದಲ್ಲೇ ಆ ಪರಂಪರೆ ಇದೆ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಸಮುದಾಯದ ಕಲ್ಯಾಣಕ್ಕೆ ಮೀಸಲಾತಿ ನೀಡಲಿಲ್ಲವೇ? ಅರಸು, ಬಂಗಾರಪ್ಪ, ಮೊಯ್ಲಿ, ಸಿದ್ದರಾಮಯ್ಯ ಅವರದ್ದು ದೊಡ್ಡ ಸಮಾಜವೇ? ಅವರ ಸಮಾಜ ಚಿಕ್ಕದಾಗಿದ್ದರೂ ಅವರಲ್ಲಿ ನಾಯಕತ್ವ ಇತ್ತು, ಹೀಗಾಗಿ ಆ ಮಟ್ಟಕ್ಕೆ ಬೆಳೆದಿದ್ದಾರೆ. ಅವರನ್ನು ಕಾಂಗ್ರೆಸ್ ಗುರುತಿಸಿದೆ. 

ನಿಮ್ಮ ಸಮಾಜದ ಸಮಸ್ಯೆ ಏನು? ನಿಮ್ಮ ಸಮಾಜದ ಕಲ್ಯಾಣಕ್ಕೆ ನಾವು ಯಾವ ದಿಕ್ಕಿನಲ್ಲಿ ಹೋಗಬೇಕು ಎಂಬುದನ್ನು ತಿಳಿಸಿ. ಗಾಣಿಗ ಸಮಾಜಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಯಾವುದೇ ಒಂದು ಸರ್ಕಾರಕ್ಕೆ ಗುರಿ ಇರಬೇಕು. ನಿಮ್ಮ ಸಮಸ್ಯೆ ತಿಳಿಸಿದರೆ ಚುನಾವಣೆಗೆ ಹೋದಾಗ ಈ ಸಮಾಜದ ಏಳಿಗೆಗೆ ಪೂರಕವಾಗಿ ನಮ್ಮ ಪ್ರಣಾಳಿಕೆ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

ನನಗೆ ನಡುಕ ಬರುತ್ತದೋ, ಇಲ್ಲವೋ ಕುಮಾರಣ್ಣನಿಗೆ ಗೊತ್ತಿದೆ
ಸಂವಾದದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, 'ನಾನು ಕುಮಾರಣ್ಣನಿಗೆ ಒಂದು ಮನವಿ ಮಾಡಿಕೊಳ್ಳುತ್ತೇನೆ. ಈ ರಾಜ್ಯದ ಚರಿತ್ರೆಯನ್ನೇ ತೆಗೆದುಕೊಂಡರೆ ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ಗುಂಡೂರಾಯರು, ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಸಮಾಜಕ್ಕೆ ಯಾವುದಾದರೂ ಪಕ್ಷ ಅಧಿಕಾರ ಕೊಟ್ಟಿದೆ ಎಂದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಎಲ್ಲ ವರ್ಗದ ಪರ ಕಾರ್ಯಕ್ರಮ ರೂಪಿಸುತ್ತದೆ. ಬಿಜೆಪಿಯಲ್ಲಾಗಲಿ ಜನತಾದಳದಲ್ಲಾಗಲಿ ಒಕ್ಕಲಿಗರು ಹಾಗೂ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರಿಗೆ ಅಧಿಕಾರ ನೀಡಿರುವ ಒಂದು ಉದಾಹರಣೆ ನೀಡಲಿ. ಅವರಿಗೆ ಆ ಇತಿಹಾಸವೇ ಇಲ್ಲ. ನಮ್ಮ ಪಕ್ಷ ಕಾಲಕಾಲಕ್ಕೆ ಆಯಾ ಸಮುದಾಯಕ್ಕೆ ನಾಯಕತ್ವ, ರಾಜಕೀಯ ಪಾಲುದಾರಿಕೆ, ಮೀಸಲಾತಿ ಕಲ್ಪಿಸಿದೆ.

ಸಾಂಪ್ರದಾಯಿಕ ವೃತ್ತಿ ಅವಲಂಬಿತರಿಗೆ ಕೋವಿಡ್ ಸಮಯದಲ್ಲಿ ಪರಿಹಾರ ನೀಡಬೇಕು ಎಂದು ಹೋರಾಟ ಮಾಡಿದ್ದೇವೆ. ನಾನು ಯಾರಿಗೂ ಭಯಪಡುವ ಅಗತ್ಯವಿಲ್ಲ. ನನಗೆ ನಡುಕ ಬರುತ್ತದೆಯೋ ಇಲ್ಲವೋ ಎಂಬುದು ಕುಮಾರಣ್ಣನಿಗೆ ಚೆನ್ನಾಗಿ ಗೊತ್ತಿದೆ. ರಾಜಕಾರಣ ಮಾತನಾಡುತ್ತಾರೆ, ಮಾತನಾಡಲಿ. ನಾನು ವಿವಿಧ ಸಮಾಜದವರನ್ನು ಭೇಟಿ ಮಾಡಿಕೊಂಡು ಅವರ ನೋವು ತಿಳಿದು, ಅವರ ಏಳಿಗೆ ಬಗ್ಗೆ ಚರ್ಚಿಸುತ್ತಿದ್ದೇವೆ. ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಬದ್ಧತೆ' ಎಂದರು.

ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, 'ಈಶ್ವರಪ್ಪ ಅವರು ಆದಷ್ಟು ಬೇಗ ಆಸ್ಪತ್ರೆಯಲ್ಲಿ ಬೆಡ್ ಸಿದ್ಧಪಡಿಸಿದರೆ ನಾನು ದಾಖಲಾಗುತ್ತೇನೆ. ಯಾರೋ ಒಬ್ಬರು ಮಂತ್ರಿಯಾಗಿದ್ದವರು 24 ಗಂಟೆಗಳಲ್ಲಿ ಕಾಂಗ್ರೆಸ್ ನ 5 ದೊಡ್ಡ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದಿದ್ದರು. ಕಟೀಲ್ ಅವರು 20 ಜನ ಶಾಸಕರು ಕ್ಯೂ ನಿಂತಿದ್ದಾರೆ ಎಂದಿದ್ದಾರೆ. ನಾವು ಯಾರಾದರೂ ಒಬ್ಬ ಶಾಸಕರು ನಮ್ಮ ಪಕ್ಷ ಸೇರುತ್ತಾರೆ ಎಂದು ಹೆಸರು ಹೇಳಿದ್ದೇವಾ? ನಮ್ಮ ರಾಜಕಾರಣ ನಾವು ಮಾಡುತ್ತಿದ್ದೇವೆ, ಇವರಿಗೆ ಭಯ ಯಾಕೆ? ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಲು ಅವರು ಬಯಸಿದ್ದು, ಹಾಸಿಗೆ ವ್ಯವಸ್ಥೆ ಕಲ್ಪಿಸಿದರೆ ನಾನು ಹೋಗಿ ದಾಖಲಾಗುತ್ತೇನೆ' ಎಂದು ವ್ಯಂಗ್ಯವಾಡಿದರು.

SCROLL FOR NEXT