ರಾಜಕೀಯ

'ನೆಹರೂ, ಇಂದಿರಾ ಗಾಂಧಿಯವ್ರೇ ಆರ್ ಎಸ್ ಎಸ್ ಬಗ್ಗೆ ಮಾತನಾಡಿದಾಗ ಹಚಾ ಅಂತ ಹೋದ್ವಿ, ಇನ್ನು ಇವರ್ಯಾರ್ರಿ ನಮ್ಮ ಲೆಕ್ಕಕ್ಕೆ'?: ಕೆ.ಎಸ್. ಈಶ್ವರಪ್ಪ

Sumana Upadhyaya

ಬಾಗಲಕೋಟೆ: ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಮತ್ತು ಅವರ ಪುತ್ರಿ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ನೆಹರೂ, ಇಂದಿರಾ ಗಾಂಧಿಯವರು ಮಾತನಾಡಿದಾಗಲೇ ಹಚಾ ಅಂತ ಹೋದ್ವಿ, ಇನ್ನು ಇವರೆಲ್ಲಾ ನಮಗೆ ಯಾವ ಲೆಕ್ಕಕ್ಕೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಮಾತನಾಡುವಾಗ ಟೀಕಿಸಿದ್ದಾರೆ.

ಆರ್ ಎಸ್ ಎಸ್ ಇಡೀ ದೇಶದ ಯುವಕರಿಗೆ ರಾಷ್ಟ್ರಭಕ್ತಿಯನ್ನು ಮೂಡಿಸುವಂತಹ ಒಂದು ದೊಡ್ಡ ಸಂಸ್ಥೆ. ಆರ್ ಎಸ್ ಎಸ್ ಇಲ್ಲದಿದ್ದಿದ್ದರೆ ಇಷ್ಟುತ್ತೊಗೆ ನಮ್ಮ ದೇಶ ಪಾಕಿಸ್ತಾನ ಆಗಿ ಹೋಗಿರುತ್ತಿತ್ತು. ಐಎಎಸ್. ಐಪಿಎಸ್ ಅಧಿಕಾರಿಗಳ ಮೂಲಕ ಆರ್ ಎಸ್ ಎಸ್ ಅಧಿಕಾರ ನಡೆಸುತ್ತಿದೆ ಎನ್ನುವುದು ಮೆದುಳಿಗೆ ಪೊರೆ ಬಂದವರು ನೀಡುವಂತಹ ಹೇಳಿಕೆಗಳು ಎಂದು ಗುಡುಗಿದ್ದಾರೆ.

ಮುಸಲ್ಮಾನರು, ಕ್ರಿಸ್ತಿಯನ್ನರ ವೋಟ್ ಗಳ ಮೇಲೆ ಕಣ್ಣಿಟ್ಟು ಆರ್ ಎಸ್ ಎಸ್ ನ್ನು ಬೈಯುತ್ತಿದ್ದಾರೆ. ಆರ್ ಎಸ್ ಎಸ್ ನ್ನು ಬೈದುಬಿಟ್ಟರೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನವರು ಇದ್ದಾರೆ. ಮುಂಚೆ ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಎಂದು ಕರೆಯುತ್ತಿದ್ದರು, ಇವತ್ತು ಹಿಂದುಳಿದವರು, ದಲಿತರು ಕೂಡ ಬಿಜೆಪಿಯನ್ನು ಬೆಂಬಲಿಸುತ್ತಿರುವುದರಿಂದ ಅವರಿಗೆ ಬೇರೆ ದಾರಿ ತೋಚುತ್ತಿಲ್ಲ, ಭ್ರಮ ನಿರಸನವಾಗಿದ್ದಾರೆ. ಇವತ್ತು ಭೂತಕನ್ನಡಿ ಹಿಡಿದುಕೊಂಡು ದೇಶದಲ್ಲಿ ಕಾಂಗ್ರೆಸ್ ಎಲ್ಲಿ ಅಧಿಕಾರದಲ್ಲಿದೆ ಎಂದು ಹುಡುಕಬೇಕು ಹಾಗಾಗಿದೆ ಪರಿಸ್ಥಿತಿ ಎಂದರು.

ರಾಷ್ಟ್ರಭಕ್ತ ಮುಸಲ್ಮಾನರು ಬಿಜೆಪಿ ಜೊತೆಗಿದ್ದಾರೆ, ಅಲ್ಲೊಬ್ಬರು, ಇಲ್ಲೊಬ್ಬರು ಕಾಂಗ್ರೆಸ್-ಜೆಡಿಎಸ್ ನಲ್ಲಿದ್ದಾರಷ್ಟೆ, ಅವರು ಕೂಡ ಕಾಂಗ್ರೆಸ್ ನಲ್ಲಿದ್ದರೆ ಉದ್ದಾರವಾಗಲ್ಲವೆಂದು ಮನವರಿಕೆಯಾಗಿ ನಮ್ಮ ಜೊತೆ ಬರುತ್ತಾರೆ ಎಂದರು. 

SCROLL FOR NEXT