ರಾಜಕೀಯ

ನಿಮ್ಮ ಕೈಗಳಲ್ಲಿ ರಕ್ತ ಅಂಟಿಸಿಕೊಂಡು ಹೇಗೆ ಮಲಗುತ್ತೀರೋ ದೇವರಿಗೇ ಗೊತ್ತು: ಸಿದ್ದರಾಮಯ್ಯಗೆ ಸಿಎಂ ತಿರುಗೇಟು

Shilpa D

ಬೆಂಗಳೂರು: ನೈತಿಕ ಪೊಲೀಸ್‌ಗಿರಿ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಕ್ರಿಯೆಗೆ ಸಹಜವಾಗಿಯೇ ಪ್ರತಿಕ್ರಿಯೆ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿದ್ದರು. ಇದಕ್ಕೆ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಹೇಳಿಕೆಯನ್ನು ಸರಣಿ ಟ್ವೀಟ್‌ಗಳಲ್ಲಿ ಸಿದ್ದರಾಮಯ್ಯ ಖಂಡಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವಿಟ್ಟರ್‌ನಲ್ಲಿಯೇ ಸಿದ್ದರಾಮಯ್ಯ ಅವರಿಗೆ ಬಸವರಾಜ ಬೊಮ್ಮಾಯಿ ಖಾರವಾಗಿ ಉತ್ತರ ನೀಡಿದ್ದಾರೆ. "ಟಿಪ್ಪು ಸುಲ್ತಾನ ತನ್ನ ಆಳ್ವಿಕೆಯಲ್ಲಿ ಮಾಡಿದಂತೆ ನೀವು ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಕಾರ್ಯಕರ್ತರನ್ನು ಸಾಯಿಸುವ ಮೂಲಕ ಹಿಂದೂ ವಿರೋಧಿಗಳ ಆದರ್ಶಪ್ರಾಯರಾಗಿದ್ದಿರಿ. ನಾನು ನಿಮ್ಮಿಂದ ಆಡಳಿತ ಅಥವಾ ಪೊಲೀಸಿಂಗ್ ಕಲಿಯಬೇಕಿಲ್ಲ. ನಿಮ್ಮ ಸರ್ಕಾರದ ಅಡಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಕುಳಿತಿದ್ದ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸಮರ್ಥ ಪೊಲೀಸ್ ಪಡೆ ನಮ್ಮ ಬಳಿ ಇದೆ' ಎಂದು ಬೊಮ್ಮಾಯಿ ಹೇಳಿದ್ದಾರೆ.

ಪ್ರತಿಯೊಂದು ಕ್ರಿಯೆಯೂ ತಕ್ಕ ಪ್ರತಿಕ್ರಿಯೆ ನಮ್ಮ ಸಮಾಜದಲ್ಲಿ ಇರುತ್ತದೆ ಮತ್ತು ಕಾನೂನು ತನ್ನದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ಹೇಳಿದ್ದೆ. ನಿಮ್ಮ ಆಳ್ವಿಕೆಯಲ್ಲಿ ಹಿಂದೂಗಳನ್ನು ಮೂಲೆ ಮೂಲೆಯಲ್ಲಿಯೂ ಕೊಂದಿರುವಂತೆ ಅಲ್ಲ. ನೀವು ಕನ್ನಡಿಯನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಬೇಕಿದೆ. ನಿಮ್ಮ ಕೈಗಳಲ್ಲಿ ರಕ್ತ ಅಂಟಿಸಿಕೊಂಡು ಹೇಗೆ ಮಲಗುತ್ತೀರೋ ಎಂದು ದೇವರಿಗೇ ಗೊತ್ತು' ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

SCROLL FOR NEXT