ರಾಜಕೀಯ

'ಬೈಗಮಿ' ಕುಮಾರಸ್ವಾಮಿ ಬೇರೆಯವರ ತಪ್ಪುಗಳ ಬಗ್ಗೆ ಮಾತನಾಡುವಾಗ ಜಾಗರೂಕರಾಗಿರಬೇಕು; ವೈಯಕ್ತಿಕವಾಗಿ ಬಿಜೆಪಿ ಟೀಕೆ 

Sumana Upadhyaya

ಬೆಂಗಳೂರು: ಅಕ್ಟೋಬರ್ 30ರಂದು ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ, ಆರೋಪ-ಪ್ರತ್ಯಾರೋಪ ತಾರಕಕ್ಕೇರುತ್ತಿದೆ. ಟೀಕಿಸುವ ಭರದಲ್ಲಿ ರಾಜಕೀಯ ನಾಯಕರಿಗೆ ತಾವೇನು ಮಾತನಾಡುತ್ತಿದ್ದೇವೆ, ಹೇಳುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದಂತೆ ಕಂಡುಬರುತ್ತಿದೆ.

ಟ್ವೀಟ್ ಗಳ ಮೂಲಕ ವೈಯಕ್ತಿಕ ಮಟ್ಟಕ್ಕೂ ಇಳಿದು ಟೀಕಿಸುತ್ತಿದ್ದಾರೆ.ಕಳೆದ ಕೆಲ ದಿನಗಳಿಂದ ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಬಹಿರಂಗವಾಗಿ ಪರಸ್ಪರ ಟೀಕೆ, ಆರೋಪ ಮಾಡುವುದಲ್ಲದೆ ಆಯಾ ಪಕ್ಷಗಳ ಟ್ವಿಟ್ಟರ್ ಪೇಜ್ ನಲ್ಲಿ ಸರಣಿ ಟ್ವೀಟ್ ಗಳ ಸುರಿಮಳೆಯೇ ಹರಿಯುತ್ತಿದೆ.

ನಿನ್ನೆ ವಿಜಯಪುರದಲ್ಲಿ ಮಾತನಾಡಿದ್ದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ನಾನು ಆರ್ ಎಸ್ ಎಸ್ ಶಾಖೆಯಿಂದ ಕಲಿಯಬೇಕಾದ್ದು ಏನೂ ಇಲ್ಲ, ಆರ್ ಎಸ್ ಎಸ್ ನಲ್ಲಿ ತರಬೇತಿ ಪಡೆದು ಬಂದವರು ವಿಧಾನಸೌಧದಲ್ಲಿ ಕಲಾಪ ನಡೆಯುವಾಗ ನೀಲಿ ಚಿತ್ರ ವೀಕ್ಷಣೆ ಮಾಡುತ್ತಾರೆ, ಇದೇನಾ ಆರ್ ಎಸ್ ಎಸ್ ನಲ್ಲಿ ಹೇಳಿಕೊಡೋದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದ್ದರು.

ಅದಕ್ಕೆ ಬಿಜೆಪಿ ಟ್ವಿಟ್ಟರ್ ಪೇಜ್ ನಲ್ಲಿ ಇಂದು ಕುಮಾರಸ್ವಾಮಿ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಲಾಗಿದೆ. ಬೇರೆಯವರ ತಪ್ಪುಗಳ ಬಗ್ಗೆ ಮಾತನಾಡುವ ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಬೇಕಲ್ಲವೇ, ನಿಮ್ಮ ಬಗ್ಗೆ ನೀವು ಆತ್ಮಾವಲೋಕನ ಮಾಡಿಕೊಳ್ಳಿ. ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇವೆಲ್ಲ ತಪ್ಪುಗಳನ್ನು ಮಾಡಿರುವ ನೀವು ಎಲ್ಲಕ್ಕಿಂತ ಮುಖ್ಯವಾಗಿ  ಬೈಗಮಿ(ದ್ವಿಪತ್ನಿತ್ವ)ಯಲ್ಲವೇ ಎಂದು ಪ್ರಶ್ನೆ ಮಾಡಿ ಟೀಕಿಸಿದೆ. ಇದಕ್ಕೆ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಎಂದು ನೋಡಬೇಕು.

SCROLL FOR NEXT