ರಾಜಕೀಯ

ಪಕ್ಷದಲ್ಲಿ ಉಳಿಯುವುದು, ಬಿಡುವುದು ಜಿಟಿ ದೇವೇಗೌಡರಿಗೆ ಬಿಟ್ಟ ವಿಚಾರ: ಹೆಚ್.ಡಿ. ಕುಮಾರಸ್ವಾಮಿ

Manjula VN

ಮೈಸೂರು: ಪಕ್ಷದಲ್ಲಿ ಉಳಿಯುವುದು, ಬಿಡುವುಡು ಜಿಟಿ ದೇವೇಗೌಡ ಅವರಿಗೆ ಬಿಟ್ಟ ವಿಚಾರ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಭಾನುವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರ ಸಂಘದಿಂದ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಶಾಸಕ ಜಿಟಿ ದೇವೇಗೌಡರು ನನ್ನ ಸಂಪರ್ಕ ಕಳೆದುಕೊಂಡು 2 ವರ್ಷಗಳು ಕಳೆದಿವೆ. ಪಕ್ಷದಲ್ಲಿ ಉಳಿಯುವುದು ಅಥವಾ ಬಿಡುವುಡು ಅವರಿಗೆ ಬಿಟ್ಟ ವಿಚಾರ. ಉಳಿಯುತ್ತೇನೆ ಎನ್ನುವ ಸಂದರ್ಭ ಬಂದಾಗ ಮುಂದಿನ ಮಾತನ್ನು ಹೇಳುತ್ತೇನೆ. ಈಗ ಅಂತಹ ಮಾತು ಬರುವುದಿಲ್ಲ ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಹಾಗೂ ಜಿ.ಡಿ.ಹರೀಶಗೌಡ ಸ್ನೇಹಿತರು. ಅವರ ಹಂತದಲ್ಲಿ ಏನಾದರೂ ಮಾತುಕತೆ ನಡೆಯುತ್ತಿರಬಹುದು. ಒಂದು ವೇಳೆ ಮಕ್ಕಳು ಹೇಳಿದರೆ ಕೇಳಬೇಕಾಗುತ್ತದೆ. ನಿಖಿಲ್ ಜತೆಗೆ ಹರೀಷ್ ಗೌಡ, ಮಹದಾವಪುತ್ರ ಪ್ರಸನ್ನ, ಪುಟ್ಟರಾಜು ಪುತ್ರ ಶಿವರಾಜು ಸಮಕಾಲೀನರು. ಅವರ ಮಟ್ಟದಲ್ಲಿ ಯಾವ ಬೆಳವಣಿಗೆ ನಡೆದಿದೆಯೋ ಎನ್ನುವುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಜೆಡಿಎಸನ್ನು ಜೆಡಿಎಫ್ (ಫ್ಯಾಮಿಲಿ) ಪಕ್ಷ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ವರುಣದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡಿದ್ದು ಕುಟುಂಬ ರಾಜಕಾರಣವಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

ಕ್ಷೇತ್ರದ ಚುನಾವಣೆಯಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದ ತಮ್ಮ ಕಿರಿಯ ಮಗನನ್ನೇಕೆ ತಂದು ನಿಲ್ಲಿಸಿದಿರಿ? ನಿಮಗೆ ನಿಷ್ಠಾವಂತರಾದ ಯಾರನ್ನಾದರೂ ನಿಲ್ಲಿಸಬಹುದಿತ್ತಲ್ಲವೇ? ನಿಮ್ಮದು ಕುಟುಂಬ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದರು.

SCROLL FOR NEXT