ರಾಜಕೀಯ

ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಧಾವಂತವಿಲ್ಲ, 2023ರ ವಿಧಾನಸಭೆ ಚುನಾವಣೆಗಾಗಿ ಕಾಯುತ್ತೇನೆ: ಬಿ.ವೈ. ವಿಜಯೇಂದ್ರ

Shilpa D

ಬೆಂಗಳೂರು: ಮುಂಬರುವ ಸಿಂಧಗಿ ಮತ್ತು ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ಊಹಾ ಪೋಹಗಳ ಸಂಬಂಧ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ, 2023ರ ವಿಧಾನಸಭೆ ಚುನಾವಣೆವರೆಗೂ ಕಾಯುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಜೆಡಿಎಸ್ ಶಾಸಕ ಎಂಸಿ ಮನಗೂಳಿ ಮತ್ತು ಸಿಎಂ ಉದಾಸಿ ಅವರ ನಿಧನದಿಂದ ತೆರವಾಗಿರುವ ಸಿಂಧಗಿ ಮತ್ತು ಹಾನಗಲ್ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮುಂದಿನ ವಿಧಾನಸಭೆ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬೆನ್ನಲ್ಲೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಯಡಿಯೂರಪ್ಪ ಪುತ್ರ ವಿಜಯೇಂದ್ರ, 2023ರ ವಿಧಾನಸಭೆ ಚುನಾವಣೆಗೆ ಇನ್ನೂ 19 ತಿಂಗಳು ಮಾತ್ರ ಬಾಕಿಯಿದೆ. "ನಾನು ಈಗ ತರಾತುರಿಯಲ್ಲಿ ಸ್ಪರ್ಧಿಸಿದರೆ, ನಾನು 2023 ರಲ್ಲಿ ನನ್ನ ಕ್ಷೇತ್ರವನ್ನು ಬದಲಾಯಿಸಬೇಕಾಗಬಹುದು. ನನ್ನ ಬೆಂಬಲಿಗರು ಶಾರ್ಟ್‌ಲಿಸ್ಟ್ ಮಾಡುವ ಕ್ಷೇತ್ರದಿಂದ 2023 ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ" ಎಂದು ಅವರು ಹೇಳಿದರು.

ತಂದೆ ಯಡಿಯೂರಪ್ಪ, ಸಹೋದರ ಮತ್ತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಮತ್ತು ಬೆಂಬಲಿಗರೊಂದಿಗೆ ಚರ್ಚೆ ನಡೆಸಿ ಚುನಾವಣೆಗೆ ಆರು ತಿಂಗಳ ಮೊದಲು ನಿರ್ಧಾರಕ್ಕೆ ಬರುವುದಾಗಿ ವಿಜಯೇಂದ್ರ ಹೇಳಿದ್ದಾರೆ. ಕಳೆದ ಬಾರಿ, ನಾನು ವರುಣಾದಿಂದ ಸ್ಪರ್ಧಿಸಲು ಬಯಸಿದ್ದೆ, ಆದರೆ ಪಕ್ಷ ಅವಕಾಶ ನೀಡಲಿಲ್ಲ.. ನನಗೆ ಈ ಬಾರಿ ಅಂತಹ ಮುಜುಗರ ಆಗುವುದು ಬೇಡ" ಎಂದು ಅವರು ಹೇಳಿದರು.

ವಿಜಯೇಂದ್ರ ಅವರನ್ನು  ಪ್ರಮೋಟ್ ಮಾಡುವ ಉದ್ದೇಶದಿದ ಯಡಿಯೂರಪ್ಪ ಅವರು ಬಿಜೆಪಿಯಿಂದ ಸ್ವತಂತ್ರವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಪಕ್ಷದ ನಾಯಕತ್ವದ ಒಪ್ಪಿಗೆಯಿಲ್ಲದೆ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ, ಉತ್ತರಿಸಿದ ವಿಜಯೇಂದ್ರ, ನನ್ನ ತಂದೆ ಕೈಗೊಂಡಿರುವ ರಾಜ್ಯವ್ಯಾಪಿ ಪ್ರವಾಸವನ್ನು ಬಿಜೆಪಿ ನಾಯಕರೊಂದಿಗೆ ಸಮಾಲೋಚಿಸಿ ಯೋಜಿಸಲಾಗಿದೆ. ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪ ಅವರ ಜೊತೆಗೆ ಸದಾ ಇರುತ್ತಾರೆ ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಬೊಮ್ಮಾಯಿ ಸಿಎಂ ಆಗಿದ್ದಾರೆ ಹೀಗಾಗಿ ಅವರನ್ನು ಮುಂದಿನ ನಾಯಕ ಎಂದು ಪ್ರೊಜೆಕ್ಟ್ ಮಾಡಬೇಕು, ಅವರೊಂದಿಗೆ ನಾನು ಉತ್ತಮ ಸಂಬಂಧ ಹೊಂದಿದ್ದೇನೆ ಎಂದರು. ಯಡಿಯೂರಪ್ಪ ಬೊಮ್ಮಾಯಿ ಅವರೊಂದಿಗೆ
ಕೆಲಸ ಮಾಡುತ್ತಾರೆ. ಕೆಲವರು ಇಲ್ಲಸಲ್ಲದ ಊಹಾಪೋಹಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

SCROLL FOR NEXT