ರಾಜಕೀಯ

ಮುಂದಿನ ಚುನಾವಣೆಗೆ ಸಿಎಂ ಬೊಮ್ಮಾಯಿ ನೇತೃತ್ವ: ಶೆಟ್ಟರ್‌ ಪರೋಕ್ಷ ವಿರೋಧ!

Manjula VN

ಧಾರವಾಡ: ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಗೆ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. 

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಶೆಟ್ಟರ್ ಅವರು ಕುಟುಂಬ ಸಮೇತವಾಗಿ ಮತದಾನ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇನ್ನೂ ಸಮಯಾವಕಾಶ ಬೇಕಾಗುತ್ತದೆ. ಆಗ ಮಾತ್ರ ಬೊಮ್ಮಾಯಿ ನೇತೃತ್ವದ ಸರ್ಕಾರ ಪಾಸೋ ಅಥವಾ ಫೇಲೋ ಅಂತಾ ಹೇಳಬಹುದು. ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿರುವುದರ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತೆವೆ ಎಂದು ಹೇಳಿದ್ದಾರೆ. 

ಪಕ್ಷದ ಹೈಕಮಾಂಡ್ ನಿರ್ಧಾರದಂತೆ ನಾವೂ ಮುಂದುವರೆಯುತ್ತೇವೆ. ಆದರೆ ಮುಂದಿನ ಚುನಾವಣೆ ಇನ್ನೂ ದೂರ ಇದೆ. ಹಾಗಾಗಿ ಈಗಲೆ ಅದರ ಬಗ್ಗೆ ಯಾವ ಚರ್ಚೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಾನು ಪ್ರಚಾರ ಮಾಡಿರುವೆ. ಜನರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಇದೆ. ಪಾಲಿಕೆ ಚುನಾವಣೆಯ 82 ಸ್ಥಾನಗಳಲ್ಲಿ 60ಕ್ಕೂ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪಾಲಿಕೆ ಚುನಾವಣೆಯ ಟಿಕೆಟ್ ಆಕ್ಷಾಂಕಿಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು. 700ಕ್ಕೂ ಹೆಚ್ಚು ಜನರು ಆಕ್ಷಾಂಕಿಗಳು ಇದ್ದರು. ಕೆಲವು ಕಡೆ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಬಂಡಾಯಗಾರರಿಗೆ ಬೆಂಬಲ ನೀಡಿಲ್ಲ. ಬಂಡಾಯಗಾರರು ಯಾರೂ ಗೆಲುವು ಸಾಧಿಸುವುದಿಲ್ಲ ಎಂದರು.

ಇದೇ ವೇಳೆ ಬೆಲೆ ಏರಿಕೆ ಕುರಿತು ಮಾತನಾಡಿ, ಬೆಲೆ ಏರಿಕೆ ಬೇರೆ ಪಕ್ಷವಿದ್ದಾಗಲೂ ಇತ್ತು. ಆದ್ದರಿಂದ ಯಾವುದೇ ರೀತಿ ಪಾಲಿಕೆ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

SCROLL FOR NEXT