ರಾಜಕೀಯ

ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ, ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿಯಲ್ಲ, ಬಿಜೆಪಿಗೆ ಎಚ್ಚರಿಕೆ ಗಂಟೆ: ಸಿದ್ದರಾಮಯ್ಯ 

Sumana Upadhyaya

ಬೆಂಗಳೂರು: ಸೋಮವಾರ ಪ್ರಕಟಗೊಂಡ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣಾ ಫಲಿತಾಂಶವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮೂರು ಮಂದಿ ಶಾಸಕರು ಇದ್ದಾರೆ, ಹೀಗಾಗಿ ಸಹಜವಾಗಿ ಬಿಜೆಪಿ ಕಡೆಗೆ ಗೆಲುವಿಗೆ ಪೂರಕ ಅಂಶಗಳು ಹೆಚ್ಚಾಗಿರುತ್ತದೆ. ಮತದಾರರು ಆಡಳಿತ ಪಕ್ಷಕ್ಕೆ ಹೆಚ್ಚು ವಾಲುತ್ತಾರೆ. ನಮ್ಮ ಪಕ್ಷದ ಒಬ್ಬರೇ ಒಬ್ಬ ಶಾಸಕರಿದ್ದಾರಷ್ಟೆ ಎಂದರು.

ಇನ್ನು ಬೆಳಗಾವಿಯಲ್ಲಿ ನಾವು ಯಾವತ್ತೂ ಗೆದ್ದಿರಲಿಲ್ಲ, ನಮ್ಮ ಬೆರಳೆಣಿಕೆಯ ಶಾಸಕರಿದ್ದಾರಷ್ಟೆ, ಪಾಲಿಕೆಯ ಚುನಾವಣೆಯ ಫಲಿತಾಂಶವನ್ನಿಟ್ಟುಕೊಂಡು ರಾಜ್ಯದ ಜನತೆಯ ಒಲವು ಬಿಜೆಪಿ ಪರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಆಡಳಿತವನ್ನು ಹೊಂದಿರುವ ಬಿಜೆಪಿಯಲ್ಲಿ ಸಂಪನ್ಮೂಲ ಹೆಚ್ಚಾಗಿರುತ್ತದೆ. ಅಧಿಕಾರ, ಹಣ ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದಿರಬಹುದು ಅಲ್ಲವೇ, ಹಾಗೆಂದು ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಫಲಿತಾಂಶವೇನು ಕಡಿಮೆಯಲ್ಲ ಎಂದರು.

ಇನ್ನು ಕಲಬುರಗಿಯಲ್ಲಿ ಬಿಜೆಪಿಯನ್ನು ಮತದಾರರು ಅಷ್ಟೊಂದು ಒಪ್ಪಿಕೊಂಡಿಲ್ಲ, ಹೀಗಾಗಿ ಅವರಿಗೆ ಹಿನ್ನಡೆಯಾಗಿದೆ ಎಂದರು.
ಇದು ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ನಾನು ಭಾವಿಸುವುದಿಲ್ಲ. ಇದು ನಮಗೆ ಹಿನ್ನಡೆಯೇನಲ್ಲ, ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

SCROLL FOR NEXT