ರಾಜಕೀಯ

ಕಲಬುರಗಿ: 4 ಸ್ಥಾನ ಗೆದ್ದಿರುವ ಜೆಡಿಎಸ್ ಮೇಯರ್ ಕುರ್ಚಿಗೆ ಪಟ್ಟು, ಯಾವ ಪಕ್ಷ ಒಪ್ಪುತ್ತೋ ಅವರಿಗೆ ಬೆಂಬಲ!

Vishwanath S

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಇದೀಗ ಆಟ ಶುರು ಮಾಡಿದ್ದು ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಡುವವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದೆ. 

ಬಿಜೆಪಿ ಮತ್ತು ಕಾಂಗ್ರೆಸ್ ಗೆ ಷರತ್ತು ವಿಧಿಸಿರುವ ಜೆಡಿಎಸ್ ಮೇಯರ್ ಪಟ್ಟ ಸೇರಿದಂತೆ ಪ್ರಮುಖ ಸ್ಥಾಯಿ ಸಮಿತಿಗಳ ಸ್ಥಾನ ನೀಡಬೇಕು ಎಂಬ ಹೇಳುತ್ತಿದೆ. ಇದಕ್ಕೆ ಯಾವ ಪಕ್ಷ ಒಪ್ಪುತ್ತದೆಯೋ ಆ ಪಕ್ಷಕ್ಕೆ ಬೆಂಬಲ ಸೂಚಿಸುವುದಾಗಿ ಜೆಡಿಎಸ್ ಕಾರ್ಪೋರೇಟರ್ ಗಳು ತಿಳಿಸಿದ್ದಾರೆ. 

55 ಸದಸ್ಯರ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸರಳ ಬಹುಮತ ಗಳಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ 27 ವಾರ್ಡ್‌ಗಳಲ್ಲಿ, ಬಿಜೆಪಿ 23 ಮತ್ತು ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಗೆದ್ದರೆ ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ನಾಲ್ಕು ಸ್ಥಾನ ಪಡೆದ ಜೆಡಿಎಸ್ ಪಕ್ಷವನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ತಂತ್ರ ರೂಪಿಸುತ್ತಿವೆ.

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಸ್ಥಾನಗಳು ಬಂದಿವೆ. ಆದರೆ ನಾಲ್ಕು ಸ್ಥಾನಗಳು ಬರುತ್ತವೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ. ಕುಮಾರಸ್ವಾಮಿ ಹತ್ರವೂ ಮಾತಾಡಿದ್ದಾರೆ ಎಂದಿದ್ದಾರೆ.

ಇನ್ನುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಲಬುರಗಿ ನಗರ ಪಾಲಿಕೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಲು ಜೆಡಿಎಸ್ ಆಸಕ್ತಿ ತೋರಿಸಿದೆ ಎಂದು ಹೇಳಿದ್ದಾರೆ. "ಈ ಸಂಬಂಧ ನಾನು ಜೆಡಿಎಸ್ ನಾಯಕರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಕೂಡ ಮೈತ್ರಿ ಪಾಲುದಾರರಾಗುವ ಆಶಯ ವ್ಯಕ್ತಪಡಿಸಿದ್ದಾರೆ. ಇದೊಂದು ಒಳ್ಳೆಯ ಸಂಕೇತ ಎಂದು ಅವರು ಹೇಳಿದರು.

SCROLL FOR NEXT