ರಾಜಕೀಯ

ಸಿದ್ದರಾಮಯ್ಯ ಹಿಂದೂ ವಿರೋಧಿ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ 

Sumana Upadhyaya

ದಾವಣಗೆರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ದೇಗುಲ ಧ್ವಂಸ ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪಿಸಿದ್ದಾರೆ.

ನಿನ್ನೆ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ದೇವಾಲಯಗಳ ರಕ್ಷಣೆಯನ್ನು ಬಲವಾಗಿ ನಂಬುತ್ತಿದ್ದು, ಇದಕ್ಕೆ ಬೇರೆ ರಾಜಕೀಯ ಪಕ್ಷಗಳ ನಾಯಕರ ಸಲಹೆ, ಅಭಿಪ್ರಾಯಗಳು ಬೇಕಾಗಿಲ್ಲ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹಿಂದೂ ವಿರೋಧಿ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ನಾಯಕರು ಕೇವಲ ಮಸೀದಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ದೇವಾಲಯ ಧ್ವಂಸದ ಬಗ್ಗೆ ಸಿದ್ದರಾಮಯ್ಯನವರ ಏಕಾಏಕಿ ಕಾಳಜಿ ಕೇವಲ ಕರುಣೆ ಗಿಟ್ಟಿಸಿಕೊಳ್ಳುವ ತಂತ್ರವಷ್ಟೆ, ನಿಜವಾಗಿಯೂ ಅವರಿಗೆ ಹಿಂದೂಗಳ ಮತ್ತು ದೇವಾಲಯಗಳ ಬಗ್ಗೆ ಕಾಳಜಿ ಹೊಂದಿಲ್ಲ ಎಂದಿದ್ದಾರೆ.

ನಾವು ಅದೇ ಜಾಗದಲ್ಲಿ ಒಂದು ಸುಂದರ ದೇವಾಲಯ ನಿರ್ಮಿಸುತ್ತೇವೆ. ಬೇರೆಯವರಿಂದ ಪಾಠ ಕಲಿಯಬೇಕಾಗಿಲ್ಲ. ದೇವರ ಬಗ್ಗೆ ನಮಗೂ ವಿಶೇಷ ಪ್ರೀತಿಯಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ನಮ್ಮ ನಿಲುವು ಏನೆಂದು ಅರ್ಥ ಮಾಡಿಕೊಳ್ಳಬಹುದು ಎಂದರು.

ಕಾಂಗ್ರೆಸ್ ಪಕ್ಷ ದೇವಾಲಯ ನಿರ್ಮಾಣ ಮೇಲೆ ನಂಬಿಕೆ ಹೊಂದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಅವರು ವಿರೋಧಿಸುತ್ತಿದ್ದಾರೆ. ಅವರ ಈ ಹಠಾತ್ ಬದಲಾವಣೆ ನಿಲುವು ಕೇವಲ ರಾಜಕೀಯ ನಡೆಯಷ್ಟೆ, ಇದರಿಂದ ಅವರಿಗೆ ಏನೂ ಲಾಭವಾಗುವುದಿಲ್ಲ ಎಂದಿದ್ದಾರೆ.

ಬಿಎಸ್ ವೈ ರಾಜ್ಯ ಪ್ರವಾಸ: ಬಿ ಎಸ್ ಯಡಿಯೂರಪ್ಪನವರು ಪ್ರಬುದ್ಧ ರಾಜಕಾರಣಿಯಾಗಿದ್ದು ಅವರ ಯೋಜನೆ ಪ್ರಕಾರ ಮುಂದುವರಿಯಲು ಯಾರ ಸಹಾಯವೂ ಬೇಕಿಲ್ಲ. ಅವರು ಅವರ ಇಚ್ಛೆಯಂತೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದರು. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಂಪೂರ್ಣ ಅಂಕ ನೀಡಿದ ಅವರು, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಎಲ್ಲಾ ವರ್ಗದ ಜನರನ್ನು ತಲುಪುತ್ತಿದೆ ಎಂದು ಶ್ಲಾಘಿಸಿದರು.

SCROLL FOR NEXT