ರಾಜಕೀಯ

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣ: ಕಾಂಗ್ರೆಸ್ ನಿಂದ ಬಹಿಷ್ಕಾರ

Sumana Upadhyaya

ಬೆಂಗಳೂರು: ಲೋಕಸಭಾ ಸ್ಪೀಕರ್ ಓಂ. ಬಿರ್ಲಾ ಶುಕ್ರವಾರ ಅಪರಾಹ್ನ 2.30ಕ್ಕೆ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದರೆ ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದರಲ್ಲಿ ನಾವು ಭಾಗವಹಿಸುವುದಿಲ್ಲ, ಬಹಿಷ್ಕರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಇಂದು ವಿಧಾನಸೌಧಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಟಾಂಗಾ ಜಾಥಾ ನಡೆಸಿ ಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದೆ.ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ’ಪ್ರಜಾಪ್ರಭುತ್ವ-ಸಂಸದೀಯ ಮೌಲ್ಯಗಳ ರಕ್ಷಣೆ’ ವಿಷಯವಾಗಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಅವರ ಭಾಷಣದ ಬಗ್ಗೆ ವಿಧಾನಸಭೆಯಾಗಲಿ, ವಿಧಾನಪರಿಷತ್ ವಿಪಕ್ಷ ನಾಯಕರನ್ನು ಸಂಪರ್ಕಿಸಿ ನಮ್ಮ ಪ್ರತಿಕ್ರಿಯೆಯನ್ನು ಸರ್ಕಾರ ಕೇಳಿರಲಿಲ್ಲ. ಲೋಕಸಭಾ ಸ್ಪೀಕರ್ ಇಲ್ಲಿಗೆ ಬಂದು ಮಾತನಾಡುವ ಅಗತ್ಯವೇನಿದೆ, ಇದೊಂದು ಕೆಟ್ಟ ಸಂಪ್ರದಾಯ, ಹೀಗಾಗಿ ನಾವು ಬಹಿಷ್ಕರಿಸುತ್ತಿದ್ದೇವೆ, ನಾವು ಲೋಕಸಭಾ ಸ್ಪೀಕರ್ ಭಾಷಣ ಕೇಳಲು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಲೋಕಸಭಾ ಸ್ಪೀಕರ್ ಅವರು ವಿಧಾನಮಂಡಲದ‌ ಉಭಯ ಸದನದಲ್ಲಿ ಭಾಷಣ ಮಾಡುವ ಬಗ್ಗೆ  ಸರ್ಕಾರ ನಮ್ಮೊಂದಿಗೆ ಚರ್ಚಿಸಿಲ್ಲ. ಹೀಗೆ ಭಾಷಣ ಮಾಡಿಸುವುದು ಸಂಸದೀಯ ವ್ಯವಸ್ಥೆಗೆ ವಿರುದ್ಧ, ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸುವ ನಮ್ಮ ಸಲಹೆಯನ್ನೂ ಪರಿಗಣಿಸದ ಕಾರಣ ನಾವು ಈ ಕಾರ್ಯಕ್ರಮವನ್ನು  ಬಹಿಷ್ಕರಿಸುತ್ತೇವೆ ಎಂದು ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ.

ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ’ಪ್ರಜಾಪ್ರಭುತ್ವ-ಸಂಸದೀಯ ಮೌಲ್ಯಗಳ ರಕ್ಷಣೆ’ ವಿಷಯ ಕುರಿತು ಭಾಷಣ ಮಾಡಲಿದ್ದಾರೆ. ಈ ವೇಳೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದು, ಇದೇ ವೇಳೆ ವಿಧಾನಸಭೆಯ ಶಾಸಕರೊಬ್ಬರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಲೋಕಸಭಾಧ್ಯಕ್ಷರು ಪ್ರದಾನ ಮಾಡಲಿದ್ದಾರೆ.

ಬಿಜೆಪಿಯ ಶಾಸಕರೆಲ್ಲರೂ ಭಾಗವಹಿಸಲಿದ್ದಾರೆ. 

SCROLL FOR NEXT