ರಾಜಕೀಯ

ಮೋದಿ ಸ್ವಾಗತಕ್ಕೂ ಮುನ್ನ ಕಟೀಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ: ಸಂಸದರ ವಿರುದ್ಧ ಅಸಮಾಧಾನ!

Shilpa D

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ 2ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಅದ್ಧೂರಿ ಸ್ವಾಗತಕ್ಕೆ ಬಿಜೆಪಿ ಭರದ ಸಿದ್ಧತೆ ನಡೆಸಿದೆ. ಇನ್ನೊಂದೆಡೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಇನ್ನೊಂದು ಅವಧಿಗೆ ಸಂಸದರಾಗಿ ಮುಂದುವರಿಯಲು ಅವಕಾಶ ಕಲ್ಪಿಸಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ‘ಹಿಂದುತ್ವ’ ಕಾರ್ಯಕರ್ತರು ಅಭಿಯಾನ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಅಧಿಕಾರವಧು ಇದೇ ತಿಂಗಳಲ್ಲಿ ಕೊನೆಗೊಳ್ಳಲಿದೆ, ಹೀಗಾಗಿ ಪಕ್ಷವು ಉತ್ತರಾಧಿಕಾರಿಯ ಹುಡುಕಾಟದಲ್ಲಿದೆ. ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ಭೇಟಿ ಮಾಡುತ್ತಿಲ್ಲ, ಅವರ ಅಹವಾಲು ಕೇಳುತ್ತಿಲ್ಲ ಎಂಬುದು ಕಾರ್ಯಕರ್ತರ ಪ್ರಮುಖ ಆರೋಪವಾಗಿದೆ, ಥಳೀಯ ಬಿಜೆಪಿ ನಾಯಕತ್ವವು ಪಕ್ಷದ ಕೆಲವು ಅತೃಪ್ತ ಕಾರ್ಯಕರ್ತರೊಂದಿಗೆ ಮಾತನಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿತು.

ಇತ್ತೀಚೆಗೆ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಕಟೀಲ್ ತಡವಾಗಿ ಬಂದಾಗ ಪಕ್ಷದ ಕಾರ್ಯಕರ್ತರು ಕಟೀಲ್ ಅವರ ಕಾರಿನ ಮೇಲೆ ದಾಳಿ ನಡೆಸಿದ್ದರು ಮತ್ತು ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಇಡೀ ರಾಜ್ಯದ ಜವಾಬ್ದಾರಿಯನ್ನು ಹೊತ್ತಿರುವ ಪಕ್ಷದ ಮುಖ್ಯಸ್ಥರು ಸಂಸದರಾಗಿ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕೆಲಸಗಳಿಗೆ ಯಾವಾಗಲೂ ಸ್ಥಳೀಯವಾಗಿ ಲಭ್ಯವಿರುವುದಿಲ್ಲ ಎಂದು ಮಾಜಿ ಎಂಎಲ್ ಸಿ ಗೋ ಮಧುಸೂದನ್ ಹೇಳಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ‘ಕಟೀಲ್ ಅವರನ್ನು ಟೀಕಿಸುತ್ತಿರುವವರು ಕಾಂಗ್ರೆಸ್ ಸದಸ್ಯರು ಮತ್ತು ಕೆಲವು ಅತೃಪ್ತ ಬಿಜೆಪಿ ಕಾರ್ಯಕರ್ತರು, ಪ್ರಧಾನಿ ಭೇಟಿಗೆ ಮುನ್ನ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಆದರೆ ಕಟೀಲ್ ತಮ್ಮ ವಿರುದ್ಧದ ಟೀಕೆಗಳನ್ನು ಸಕರಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದಾರೆ. ಪ್ರಧಾನಿ ಭೇಟಿಯ ಸಿದ್ಧತೆಗಳ ಕುರಿತು ಸ್ಥಳೀಯ ಪದಾಧಿಕಾರಿಗಳು ಮತ್ತು ಶಾಸಕರನ್ನು ಭೇಟಿಯಾಗುವುದರಲ್ಲಿ ನಿರತರಾಗಿದ್ದಾರೆ. ಈ ಸಂಬಂಧ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

SCROLL FOR NEXT