ರಾಜಕೀಯ

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಮರು ಜಾರಿ: ಎಂ.ಬಿ.ಪಾಟೀಲ್

Manjula VN

ವಿಜಯಪುರ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ತರಲಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಪಿಂಚಣಿ ಯೋಜನೆಯು ನಿವೃತ್ತಿಯ ನಂತರ ಯಾವುದೇ ಆರ್ಥಿಕ ಭದ್ರತೆಯನ್ನು ನೀಡುವುದಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುತ್ತೇವೆಂದು ಹೇಳಿದರು.

ಹೊಸ ಯೋಜನೆಯಲ್ಲಿ ಹಲವು ದೋಷಗಳಿದ್ದು, ನೌಕರರ ಸಂಬಳದಿಂದ ಕಡಿತಗೊಳಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. "ಷೇರು ಮಾರುಕಟ್ಟೆಯು ಅಸ್ಥಿರವಾಗಿರುವುದರಿಂದ, ನೌಕರರು ತಮ್ಮ ನಿವೃತ್ತಿಯ ನಂತರ ಪಿಂಚಣಿಯಾಗಿ ಸಾಕಷ್ಟು ಹಣವನ್ನು ಪಡೆಯದಿರಬಹುದು. ಪಿಂಚಣಿ ವಿಚಾರವನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ನಾವು ಅಧಿಕಾರಕ್ಕೆ ಬಂದರೆ ಅದನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

ಬಳಿಕ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ನಡೆಯುತ್ತಿರುವ ಗಡಿ ವಿವಾದ ಕುರಿತು ಮಾತನಾಡಿದ ಪಾಟೀಲ್, ದಶಕಗಳ ಹಿಂದೆ ಈ ವಿಷಯ ಮುಗಿದಿದ್ದರೂ, ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಸಮಸ್ಯೆಯನ್ನು ಹುಟ್ಟುಹಾಕುತ್ತಿದ ಎಂದು ಆರೋಪಿಸಿದರು.

ತಮ್ಮ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ವಿವಾದ ಎಬ್ಬಿಸುತ್ತಿದೆ. ಜಾತ್ ಮತ್ತು ಅಕ್ಕಲಕೋಟದ ನಿವಾಸಿಗಳು ಕರ್ನಾಟಕಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಉತ್ತಮ ಸೌಲಭ್ಯಗಳನ್ನು ಒದಗಿಸದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅವರು ಅಸಮಾಧಾನ ಹೊಂದಿದ್ದಾರೆ. ವಾಸ್ತವ ಹೀಗಿರುವಾಗ ಮಹಾರಾಷ್ಟ್ರಕ್ಕೆ ಸೇರಿದರೂ ಬೆಳಗಾವಿಯ ಜನರಿಗೆ ಮಹಾರಾಷ್ಟ್ರ ಹೇಗೆ ನ್ಯಾಯ ಕೊಡುತ್ತದೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಕರ್ನಾಟಕದ ನೆಲ, ಸಂಸ್ಕೃತಿ, ಭಾಷೆ ರಕ್ಷಣೆ ವಿಚಾರದಲ್ಲಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿವೆ ಎಂದು ಹೇಳಿದರು.

SCROLL FOR NEXT