ರಾಜಕೀಯ

ಅಭಿವೃದ್ಧಿ ಹೆಸರಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮಾಡಿದ್ದೆಲ್ಲಾ ಜನರ ಲೂಟಿ- ಬಿಜೆಪಿ ಟೀಕೆ

Nagaraja AB

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ  ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮಾಡಿದ್ದೆಲ್ಲಾ ಜನರ ಲೂಟಿ ಎಂದು ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ಈ ಭಾಗದ ಜನರಿಂದ ಬದುಕಿರುವ ಪಕ್ಷ ಅವರಿಗೆ ಇಂದು ದ್ರೋಹ ಬಗೆಯುತ್ತಿದೆ. ಜಿಲ್ಲಾ ಪಂಚಾಯಿತಿಯಿಂದ  ಹಿಡಿದು ಸಂಸತ್ತಿನ ತನಕ ಹುದ್ದೆ ಹೊಂದಿರುವ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮಾತ್ರ ಯಾವುದೇ ಹುದ್ದೆಯಿಲ್ಲ ಎಂದು ಕಿಡಿಕಾರಿದೆ.

ಈ ಸಂಬಂಧ ರಾಜ್ಯ ಬಿಜೆಪಿ ಜಾಲತಾಣ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಲಾಗಿದ್ದು,  ಇಷ್ಟು ವರ್ಷಗಳ ಕಾಲ ಅಧಿಕಾರ ಕೊಟ್ಟ ಜನರಿಗೆ ತಿರುಗಿ ಕೊಟ್ಟಿದ್ದು ಮಾತ್ರ ಶೂನ್ಯ. ಕುಮಾರಸ್ವಾಮಿ ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದು ಕೇವಲ ಈ ಭಾಗದ  ಜನರನ್ನು ಮೂರ್ಖರನ್ನಾಗಿಸಲು ಮಾಡುವ ತಂತ್ರ. 'ಏನಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು' ಎನ್ನುವುದಷ್ಟೇ ಅವರ ಪಕ್ಷದ ಸಿದ್ಧಾಂತವಾಗಿದೆ ಎಂದು ಟೀಕಿಸಿದೆ.

ಕಾರ್ಯಕರ್ತರೇ ರಾಜಕೀಯ ಪಕ್ಷಗಳ ಬೆನ್ನೆಲುಬು. ಆದರೆ, ಜೆಡಿಎಸ್ ಕಾರ್ಯಕರ್ತರನ್ನೇ ಕಡೆಗಣಿಸಿ ಕೇವಲ ತಮ್ಮ ಕುಟುಂಬದವರನ್ನೇ ಚುನಾವಣಾ ಅಭ್ಯರ್ಥಿಯನ್ನಾಗಿಸುತ್ತದೆ. ಇದಕ್ಕೆ ಸ್ವಂತ ಕಾರ್ಯಕರ್ತರನ್ನೇ ನಂಬದ ಹೆಚ್.ಡಿ.ರೇವಣ್ಣ‘ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೆ ಟೋಪಿ ಹಾಕಿ ಹೋಗ್ತಾರೆ’ ಅಂತಾ ಸಮಜಾಯಿಷಿ ನೀಡುತ್ತಾರೆ ಎಂದು ಟೀಕಿಸಿದೆ.

ಕಾಂಗ್ರೆಸ್ ಪಕ್ಷ ಈ ಭಾಗದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ. ಸ್ವತಃ ಮುಖ್ಯಮಂತ್ರಿಯಾಗಿದ್ದ  ಸಿದ್ದರಾಮಯ್ಯ ಕೂಡ ಅಭಿವೃದ್ಧಿ ಕಡೆಗಣಿಸಿ ಒಡೆದಾಳುವ ನೀತಿ ಅನುಸರಿಸಿ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಿಳಿದುಬಿಟ್ಟರು. ಆದರೆ ಜನ ಇದಾವುದನ್ನೂ ಮರೆಯದೇ ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದರು. ಒಡೆಯರ್‌ ಅವರಿಗೆ ಅಗೌರವದ ಏಕವಚನದ ಪದ ಬಳಸಿದವರನ್ನು ಈ ಭಾಗದ ಸುಸಂಸ್ಕೃತ ಜನರು ಶಾಶ್ವತವಾಗಿ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದೆ. 

ಹಳೆ ಮೈಸೂರು ಭಾಗದ ಜನರಿಗೆ ಬೇಕಿರೋದು ಅಭಿವೃದ್ಧಿಯ ರಾಜಕಾರಣ. ಈ ಭಾಗದ ಜನರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಆಷಾಢಭೂತಿತನವನ್ನು ಕಂಡು ಬದಲಾವಣೆಗೆ ತೆರೆದುಕೊಂಡಿದ್ದಾರೆ. ಇದೆಲ್ಲದಕ್ಕೂ ಮಂಡ್ಯದಲ್ಲಿ ನಡೆಯುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವೇ ಮುನ್ನುಡಿಯಾಗಲಿದೆ ಎಂದು ಬಿಜೆಪಿ ಹೇಳಿದೆ.

SCROLL FOR NEXT