ರಾಜಕೀಯ

ಕಾಂಗ್ರೆಸ್ ನ ಮೇಕೆದಾಟು ಯಾತ್ರೆ ವೇಳೆ ಕೋವಿಡ್ ನಿಯಮ ಮೀರಿದರೆ ಕಾನೂನು ಕ್ರಮ, ಇಲ್ಲಿ ಅನುಮತಿಯ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಮ ಸಾರ್ವಜನಿಕರಿಗೊಂದು, ರಾಜಕೀಯ ನಾಯಕರಿಗೊಂದು, ಗಣ್ಯರಿಗೊಂದು ಎಂದು ಇಲ್ಲ, ಎಲ್ಲರಿಗೂ ಒಂದೇ, ಬಿಗಿಯಾದ ಕ್ರಮ ತೆಗೆದುಕೊಳ್ಳಲಾಗುತ್ತದೆ. 2ನೇ ಕೋವಿಡ್ ಅಲೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಬಿದ್ದಿತ್ತು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ನಿಯಮ ಮೀರಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ವಿವೇಚನೆಯಿಂದ ವರ್ತಿಸಲಿ,ರಾಜ್ಯದ ಜನತೆಯ ಬದುಕು ಮುಖ್ಯ, ರಾಜಕಾರಣ ಆಮೇಲೆ ಎನ್ನುವ ಭಾವನೆಯನ್ನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ರಂತಹ ಹಿರಿಯ, ಅನುಭವಿ ನಾಯಕರು ಹೊಂದಿಲ್ಲದಿದ್ದರೆ ಹೇಗೆ, ಪಾದಯಾತ್ರೆ ಸಮಯದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮವಾಗುತ್ತದೆ ಎಂದರು.

ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾದರೆ ಕ್ರಮ ತೆಗೆದುಕೊಳ್ಳುತ್ತೇವೆ, ಇಲ್ಲಿ ಅನುಮತಿ ಪ್ರಶ್ನೆ ಬರುವುದಿಲ್ಲ. ನಮ್ಮ ಬಿಜೆಪಿ ಸಭೆಗಳನ್ನು ನಾವು ರದ್ದು ಮಾಡಿದ್ದೇವೆ, ಎಲ್ಲಾ ಪಕ್ಷಗಳೂ ರದ್ದು ಮಾಡಿದ್ದೇವೆ, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನವರಿಗೆ ವಿಶೇಷ ಅನುಮತಿ ಹೇಗೆ ಸಾಧ್ಯ, ಅನುಮತಿಯ ಪ್ರಶ್ನೆಯೇ ಇಲ್ಲ ಎಂದರು.

ಜನವರಿ 9ನೇ ತಾರೀಖು ಮೇಕೆದಾಟು ಸಂಗಮಕ್ಕೆ ಹೋಗಿ ಕೋವಿಡ್ ನಿಯಮಾವಳಿ ಮೀರಿದರೆ ಸರ್ಕಾರ ಕೈಗೊಳ್ಳಬೇಕಾದ ಕ್ರಮ ತೆಗೆದುಕೊಳ್ಳುವುದು ಖಂಡಿತ ಎಂದರು.

SCROLL FOR NEXT