ರಾಜಕೀಯ

ಸಿದ್ದರಾಮಯ್ಯ ಪುಸ್ತಕ ಸುಳ್ಳಿನ ಕಂತೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ

Nagaraja AB

ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪಗಳನ್ನು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯ ವಾಸ್ತವ ಅಂಕಿ ಅಂಶಗಳನ್ನೇ ಮರೆ ಮಾಚಿ ಸುಳ್ಳಿನ ಕಂತೆಯಂತಿರುವ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಇಡೀ ದೇಶದ ಭದ್ರತೆಯನ್ನು ಯುಪಿಎ ಸರ್ಕಾರ ಮರೆತಿದ್ದಾಗ ಸಬ್ಸಿಡಿಗಳಿಂದಲೇ ಸಾಲ ಕೂಪದಲ್ಲಿ ಮುಳುಗಿದ್ದಾಗ ದೇಶವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಿದ್ದು ಇದೇ ಪ್ರಧಾನಿ ನೇತೃತ್ವದ ಎನ್ ಡಿಎ ಸರ್ಕಾರ. ನಿತ್ಯವೂ ಶತಕೋಟಿ ರೂಪಾಯಿ ಮೊತ್ತದಲ್ಲಿ ಭ್ರಷ್ಟಾಚಾರ ಹಗರಣಗಳನ್ನೇ ನಡೆಸುತ್ತಿದ್ದ ಯುಪಿಎ ಸರ್ಕಾರ ಕಾಲದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ತ್ವರಿತವಾಗಿ ಕಾರ್ಯವೆಸಗುವಂತೆ ಮಾಡಿದ್ದು, ಈ ಸರ್ಕಾರದ ಹೆಗ್ಗಳಿಕೆ ಎಂದು ಹೇಳಿದ್ದಾರೆ.

ದೇಶ 21ನೇ ಶತಮಾನದತ್ತ ದಾಪುಗಾಲಿಕ್ಕುತ್ತಿದ್ದರೂ ಇನ್ನೂ ಬ್ರಿಟಿಷ್ ಕಾಲದ ನೀತಿಗಳು, ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಕೆಟ್ಟ ಆರ್ಥಿಕ ನೀತಿಗಳನ್ನೇ ಸಿದ್ದರಾಮಯ್ಯ ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ರಾಜ್ಯಕ್ಕೆ ಈಗಿನ ಕೇಂದ್ರ ಸರ್ಕಾರ ಕೊಟ್ಟಷ್ಟು ಅನುದಾನ, ಬೆಂಬಲಗಳನ್ನು ಹಿಂದಿನ ಬೇರಾವ ಸರ್ಕಾರಗಳೂ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರಿ ಯೋಜನೆಗಳಲ್ಲಿ ರಾಜ್ಯದ ಬೆಳವಣಿಗೆ ಕುರಿತಾಗಿ ಅವರು ಅಂಕಿ ಅಂಶಗಳನ್ನು ತೆರೆದಿಟ್ಟಿದ್ದಾರೆ. ಜೀವನ ಜ್ಯೋತಿ ಬಿಮಾ ಯೋಜನೆಯಲ್ಲಿ 49.95 ಲಕ್ಷ ನೋಂದಣಿಯಾಗಿದ್ದು, 741.42 ಕೋಟಿ ಕ್ಲೇಮು ಆಗಿದೆ. ಸುರಕ್ಷಾ ಬಿಮಾದಲ್ಲಿ 1.1 ಕೋಟಿ ನೋಂದಣಿಯಾಗಿದ್ದು, 144.12 ಕೋಟಿ ಕ್ಲೇಮು ಆಗಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ 22. 06 ಲಕ್ಷ ಚಂದಾದಾರರಿದ್ದು ಯಶಸ್ವಿ ಯೋಜನೆಯಾಗಿದೆ ಎಂದಿದ್ದಾರೆ. 

ಹೀಗಿದ್ದರೂ ಸಹ ಸಿದ್ದರಾಮಯ್ಯ ಅವರು ವಿತಂಡವಾದ ಮುಂದಿಡುತ್ತಾ ಇಂತಹ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡಿದರೆ ಇವರೇನು ಸಿದ್ದರಾಮಯ್ಯನವರೋ ಅಥವಾ ಸುಳ್ಳುರಾಮಯ್ಯನವರೋ ಎಂಬ ಸಂದೇಹ ಮೂಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
 

SCROLL FOR NEXT