ರಾಜಕೀಯ

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೂ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲು ಶಾಸಕರಿಗೆ ಬಿಜೆಪಿ ಸೂಚನೆ

Shilpa D

ಬೆಂಗಳೂರು: ಜುಲೈ 18 ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೂ ತನ್ನ 122 ಶಾಸಕರು ಮತ್ತು 25 ಸಂಸದರು ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವಂತೆ ಬಿಜೆಪಿ ಆದೇಶ ಹೊರಡಿಸಿದೆ.

ಶನಿವಾರವೇ ಹೋಟೆಲ್ ಗೆ ಬಂದು ಸೇರುವಂತೆ ಮುಖ್ಯಸಚೇತಕ ಎಂ.ಸತೀಶ್‌ ರೆಡ್ಡಿ ಅವರು ಈಗಾಗಲೇ ಎಲ್ಲ ಶಾಸಕರಿಗೂ ಸಂದೇಶ ಕಳುಹಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ರೀತಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಇದೇ ಹೊಟೇಲ್‌ನಲ್ಲಿ ಭಾನುವಾರ ಅಣಕು ಮತದಾನ ನಡೆಸಲಾಗುವುದು. ಇದಕ್ಕಾಗಿ ದೆಹಲಿಯಲ್ಲಿ ಮೂವರು ನಾಯಕರಿಗೆ ತರಬೇತಿ ನೀಡಿ ಕಳುಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಮ್ಮ ಪ್ರವಾಸ ಕಾರ್ಯಕ್ರಮಗಳ ಕಾರಣದಿಂದ ವಿನಾಯಿತಿ ಕೋರಿರುವ ಕೆಲವು ಸಚಿವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಹೋಟೆಲ್‌ನಲ್ಲಿರುವ ನಿರೀಕ್ಷೆಯಿದೆ. ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಸೋಮವಾರ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ. ಅದಕ್ಕಾಗಿ ಅಣಕು ಮತದಾನದ ಅಗತ್ಯವಿಲ್ಲ. ಹೊಟೇಲ್‌ನಲ್ಲಿ ಇಟ್ಟುಕೊಂಡು ಸಾಧಿಸುವುದಾದರೂ ಏನು? ಅಷ್ಟಕ್ಕೂ ರಾಷ್ಟ್ರಪತಿ ಚುನಾವಣೆ ವಿಪ್‌ ಜಾರಿ ಮಾಡುವಂತಿಲ್ಲ ಎಂದು ಶಾಸಕರೊಬ್ಬರು ತಿಳಿಸಿದರು.

ಈ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗೆ ಶಾಸಕರು ಮತಪತ್ರವನ್ನು ತೋರಿಸುವಂತಿಲ್ಲ. ಚುನಾವಣಾ ಆಯೋಗ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸುವುದಾಗಿ ಈಗಾಗಲೇ ಹಲವು ಬಾರಿ ತಿಳಿಸಿದೆ. ದ್ರೌಪದಿ ಮುರ್ಮು ಗೆಲ್ಲುವುದರಲ್ಲಿ ಸಂಶಯವೂ ಇಲ್ಲ. ಎನ್‌ಡಿಎಯೇತರ ಪಕ್ಷಗಳೂ ಅವರನ್ನು ಬೆಂಬಲಿಸಿದೆ. ಆದ್ದರಿಂದ ಅತಿವೃಷ್ಟಿ ಈ ಸಂದರ್ಭದಲ್ಲಿ ಮೂರು ದಿನ ಬೆಂಗಳೂರಿನಲ್ಲೇ ಉಳಿಯಬೇಕು ಎಂದು ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಶಾಸಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT