ರಾಜಕೀಯ

ಸಿಎಂ ಇಬ್ರಾಹಿಂ ರಾಜಿನಾಮೆಯಿಂದ ತೆರವಾಗಿರುವ ಎಂಎಲ್ ಸಿ ಸ್ಥಾನ: ಹಿಂದುಳಿದ ವರ್ಗಕ್ಕೆ ನೀಡಲು ಬಿಜೆಪಿ ಪ್ಲಾನ್!

Shilpa D

ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ಖಾಲಿ ಇರುವ ಒಂದು ಸ್ಥಾನಕ್ಕೆ ಆಡಳಿತ ಪಕ್ಷ ಬಿಜೆಪಿ ಹಿಂದುಳಿದ ಸಮುದಾಯಗಳ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಹಿಂದುಳಿದ ಸಮುದಾಯಗಳಿಗೆ ಸೇರಿದ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗಿದೆ.

ಸಿಎಂ ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಆಗಸ್ಟ್‌ 11 ರಂದು ಚುನಾವಣೆ ನಡೆಯಲಿದ್ದು, ಆಗಸ್ಟ್‌ 1 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಒಂದೇ ಸ್ಥಾನ ಇರುವುದರಿಂದ ಪ್ರತಿಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿವೆ. ಹೀಗಾಗಿ ಬಿಜೆಪಿಯ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಈ ಚುನಾವಣೆಯಲ್ಲಿ  ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಬೇಕೆಂಬ ಚರ್ಚೆ ಬಿಜೆಪಿ ಪ್ರಮುಖ ನಾಯಕರ ಮಟ್ಟದಲ್ಲಿ ನಡೆದಿದೆ ಎನ್ನಲಾಗಿದ್ದು, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಕೋಲಿ ಸಮುದಾಯ, ಮರಾಠ ಸಮುದಾಯ ಅಥವಾ ಬೇರಾವುದಾದರೂ ಹಿಂದುಳಿದ ವರ್ಗದ ವ್ಯಕ್ತಿಗೆ ಅವಕಾಶ ಕಲ್ಪಿಸಬೇಕೆಂಬ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾತಿನಿಧ್ಯ ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಆ ಭಾಗದ ಕೋಲಿ ಸಮುದಾಯದ ಅಭ್ಯರ್ಥಿ, ಅದೇ ರೀತಿ ಬಸವ ಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಮರಾಠ ಸಮುದಾಯದವರಿಗೆ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಭರವಸೆ ನೀಡಿತ್ತು ಎನ್ನಲಾಗಿದ್ದು, ಆ ಕಾರಣಕ್ಕಾಗಿ ಬೀದರ್ ಜಿಲ್ಲೆಯ ಮರಾಠ ಸಮುದಾಯಕ್ಕೆ ಸೇರಿದವರಿಗೆ ಪರಿಷತ್ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

SCROLL FOR NEXT