ರಾಜಕೀಯ

ಅಗ್ನಿಪಥ್ ಯೋಜನೆ ವಿರೋಧಿಸಿ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್'ನಿಂದ ಪ್ರತಿಭಟನೆ: ಮಲ್ಲಿಕಾರ್ಜುನ ಖರ್ಗೆ

Manjula VN

ಕಲಬುರಗಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಯೋಜನೆ ವಿರುದ್ಧ ದೆಹಲಿಯ ಜಂತರ್‌ಮಂತರ್‌ನಲ್ಲಿ ಒಂದೆರೆಡು ದಿನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಯುವಕರಿಗೆ ರೈಲುಗಳಿಗೆ ಬೆಂಕಿ ಹಚ್ಚಲು ಹೇಳುವುದಿಲ್ಲ ಮತ್ತು ನಾವು ಯಾವುದೇ ರೀತಿಯ ಹಿಂಸಾಚಾರವನ್ನು ಒಪ್ಪುವುದೂ ಇಲ್ಲ. ಆದರೆ ಯುವಕರು ಏಕೆ ಆಕ್ರಮಣಕಾರಿಯಾಗಿದ್ದಾರೆಂಬುದನ್ನು ಅರಿತು, ಅವರನ್ನು ಸಮಾಧಾನಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೊಳಿಸುವಾಗ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು. 

ಅಗ್ನಿಪಥ ಯೋಜನೆಯಡಿ 4 ವರ್ಷಗಳಲ್ಲಿ ಉತ್ತಮ ಸೈನಿಕನಾಗಲು ಸಾಧ್ಯವಿಲ್ಲ. ಈ ಹಂತದಲ್ಲಿ ಸೈನಿಕನಿಗೆ ಶೇ.50ರಷ್ಟು ತರಬೇತಿ ಕೂಡ ಸಿಕ್ಕಿರುವುದಿಲ್ಲ. ಅರ್ಧದಷ್ಟು ಅವಧಿಯು ರಜಾದಿನಗಳಲ್ಲಿ ಅಥವಾ ರಜೆಗಳಲ್ಲಿ ಮುಗಿಯುದಿರುತ್ತದೆ. 

“ನಾಲ್ಕು ವರ್ಷಗಳ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ನೇಮಿಸಿಕೊಂಡಂತೆ. ಲಕ್ಷಗಟ್ಟಲೆ ಹುದ್ದೆಗಳು ಖಾಲಿ ಇರುವಾಗ ದೇಶದ ಯುವಜನತೆಗೆ ಯಾವುದೇ ರೀತಿಯ ನೆರವು ನೀಡದ ಇಂತಹ ಕಳಪೆ ಯೋಜನೆ ಜಾರಿಗೆ ತರುವುದು ಸರಿಯಲ್ಲ. ಕೂಡಲೇ ಸರಕಾರ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಸೈನಿಕರಾಗಲು ಮತ್ತು ಸಂಬಂಧಪಟ್ಟ ಹುದ್ದೆಯ ಪರೀಕ್ಷೆಗೆ ಹಾಜರಾಗಲು, ಅಭ್ಯರ್ಥಿಗಳು ತರಬೇತಿ ಪಡೆಯುತ್ತಾರೆ. ಕೋಚಿಂಗ್‌ಗಾಗಿ ಹೂಡಿದ ಹಣವನ್ನು ಮರಳಿ ಪಡೆಯುವುದಿಲ್ಲ ಎಂದು ತಿಳಿಸಿದರು.

SCROLL FOR NEXT