ರಾಜಕೀಯ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೇಳಿಕೆ: “ಉಮೇಶ್ ಕತ್ತಿಯನ್ನು ಸಂಪುಟದಿಂದ ಕಿತ್ತು ಹಾಕಿ” – ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ರಾಜ್ಯ ಇಬ್ಭಾಗ ಮಾಡುವ ಹೇಳಿಕೆಯನ್ನು ನೀಡಿರುವ ಸಚಿವ ಉಮೇಶ್ ಕತ್ತಿ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕೆಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಗುರುವಾರ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ರಾಜ್ಯವನ್ನು ಇಬ್ಭಾಗ ಮಾಡುವ ಚರ್ಚೆ ಪ್ರಧಾನಿ ನರೇಂದ್ರ ಮೋದಿ ಅವರ‌ ಮಟ್ಟದಲ್ಲಿಯೇ ನಡೆಯುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು‌ ಸಚಿವ ಉಮೇಶ್ ಕತ್ತಿ ಬಹಿರಂಗ ಪಡಿಸಿದ್ದಾರೆ. ಇದರ ಸತ್ಯಾಸತ್ಯತೆಗಳನ್ನು ಪ್ರಧಾನಿ ಮೋದಿ‌ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ.

ಸಚಿವರಾದ ಉಮೇಶ್ ಕತ್ತಿಯವರು ಜವಾಬ್ದಾರಿ ಸ್ಥಾನದಲ್ಲಿರುವವರು. ಪಕ್ಷ ಇಲ್ಲವೆ ಸರ್ಕಾರದ ಮಟ್ಟದಲ್ಲಿ ಅಂತಹ ಚರ್ಚೆ ನಡೆಯದೆ ರಾಜ್ಯ ಒಡೆಯುವ ಯೋಜನೆಯ ಬಗ್ಗೆ ಮಾತನಾಡಿರಲಾರರು. ಅವರು ಹೇಳಿರುವುದು‌ ಸುಳ್ಳಾಗಿದ್ದರೆ ಇಂತಹ ಬೇಜವಾಬ್ದಾರಿ ಹೇಳಿಕೆಗಾಗಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದಿದ್ದಾರೆ.

ಸಾವಿರಾರು ಹಿರಿಯ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು- ನುಡಿಗೆ ದ್ರೋಹ ಮಾಡಿದಂತೆ ಎಂದು ಹೇಳಿದ್ದಾರೆ.

ಸಚಿವ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯ ಸ್ಥಾಪನೆಯ ಕೂಗು ಹಾಕುತ್ತಿರುವುದು ಇದೇ ಮೊದಲ‌ಸಲವೇನಲ್ಲ. ಭಾಷಾ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಲ್ಲಿಯೇ ಇಂತಹ ಪ್ರಚೋದನಕಾರಿ ಹೇಳಿಕೆಗಳ ಪರಿಣಾಮದ ಹೊಣೆಯನ್ನು ರಾಜ್ಯ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

SCROLL FOR NEXT