ರಾಜಕೀಯ

2023 ವಿಧಾನಸಭೆ ಚುನಾವಣೆ: ಎಲ್ಲವೂ ಅಂದುಕೊಂಡಂತೆ ಆದರೆ ಪ್ರತಿ 2 ತಿಂಗಳಿಗೊಮ್ಮೆ ರಾಜ್ಯಕ್ಕೆ ಬರಲಿದ್ದಾರೆ ಪಿಎಂ ಮೋದಿ!

Shilpa D

ಬೆಂಗಳೂರು: ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟದ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಜ್ಯದ ಹಲವಾರು ಯೋಜನೆಗಳನ್ನು ಪ್ರಾರಂಭಿಸಲು, ಶಂಕುಸ್ಥಾಪನೆ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಚಿಂತನೆ ನಡೆಸಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ 108 ಅಡಿ ಬೃಹತ್ ಪ್ರತಿಮೆ ಮತ್ತು ವಸ್ತುಸಂಗ್ರಹಾಲಯ  ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದ್ದು ಪ್ರಧಾನಿ ಮೋದಿ ಉದ್ಘಾಟಿಸುವ ಸಾಧ್ಯತೆಯಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಮೂರು ಗಂಟೆಗಳ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುವ ನಿರೀಕ್ಷೆಯ ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ದಸರಾದೊಂದಿಗೆ ಮೋದಿ ಪ್ರಾರಂಭಿಸುವ ನಿರೀಕ್ಷೆಯಿದೆ. ಹಳೇ ಮೈಸೂರು ಭಾಗದಲ್ಲಿ ಉತ್ತಮ ಸಾಧನೆ ಮಾಡಬೇಕಿರುವ ಕರ್ನಾಟಕ ಬಿಜೆಪಿ, ಹೆಚ್ಚಿನ ಸಂಖ್ಯಾಬಲ ಪಡೆಯಲು ಮೋದಿ ಇಮೇಜ್  ನೆಚ್ಚಿಕೊಂಡಿದೆ.

ರಾಜ್ಯ ಸರ್ಕಾರವು ಮಧ್ಯ ಕರ್ನಾಟಕದಲ್ಲಿ ವಿವಿಧ ನೀರಾವರಿ ಸಂಬಂಧಿತ ಕಾಮಗಾರಿಗಳನ್ನು ಉದ್ಘಾಟಿಸಲು ಕಾಯುತ್ತಿದೆ, ಇದಕ್ಕಾಗಿ ಅವರು ಮೋದಿ ಅವರನ್ನು ಆಹ್ವಾನಿಸಲು ಯೋಜಿಸಿದ್ದಾರೆ, ಪಂಚಾಯತ್ ಮಟ್ಟದಲ್ಲಿ ಅಸ್ಪೃಶ್ಯತೆ ತೊಡೆದುಹಾಕಲು ಸಮಾಜ ಕಲ್ಯಾಣ ಇಲಾಖೆಯಿಂದ ‘ವಿನಯ ಸಾಮರಸ್ಯ’ ಸೇರಿದಂತೆ ಕೆಲವು ಯೋಜನೆಗಳಿಗೆ ಮೋದಿ ಹಸಿರು ನಿಶಾನೆ ತೋರುವ ನಿರೀಕ್ಷೆಯಿದೆ.

ತಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಪ್ರಧಾನಿಯನ್ನು ಆಹ್ವಾನಿಸಲು ಯೋಜಿಸುತ್ತಿರುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕಳೆದ ವಾರ ಬಂದಾಗ ಅವರು ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರು, ಹೀಗಾಗಿ ಇಲ್ಲಿಗೆ ಬರಲಾಗಲಿಲ್ಲ, ನಮ್ಮ ಯೋಜನೆಗಳನ್ನು ಉದ್ಘಾಟಿಸಲು ಮೋದಿ ಅವರನ್ನು ಕರೆ ತರಲು ಯೋಜಿಸುತ್ತಿದ್ದೇವೆ ಒಂದು ವೇಳೆ ಸಾಧ್ಯವಾಗದಿದ್ದರ್ ವರ್ಚ್ಯೂವಲ್ ಆಗಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದರೆ ಎರಡು ತಿಂಗಳಿಗೊಮ್ಮೆಯಾದರೂ ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಯೋಜನೆಗಳನ್ನು  ಉದ್ಘಾಟಿಸಲು ಅಥವಾ ಶಂಕು ಸ್ಥಾಪನೆ ಮಾಡಲು ಬಂದರೆ, ರಾಜ್ಯ ಬಿಜೆಪಿಗೆ ಹಲವು ರೀತಿಯಲ್ಲಿ ಸಹಾಯವಾಗಲಿದೆ. ನಮಗೆ ಹೆಚ್ಚು ಪ್ರಚಾರ ಸಿಗುತ್ತದೆ.  ಮೋದಿ ಭೇಟಿಯು ಚುನಾವಣಾ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಹೆಚ್ಚಿನ ಜನರು ಭಾಗವಹಿಸುತ್ತಾರೆ, ಆದರೆ ನಮ್ಮ ಸಿಎಂ ಅಥವಾ ಇತರೆ ಸಚಿವರು ಹೀಗೆ ಮಾಡಿದರೆ ಅದರ ಪರಿಣಾಮ ಅಷ್ಟರ ಮಟ್ಟಿಗೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

SCROLL FOR NEXT