ರಾಜಕೀಯ

ರಾಜಸ್ಥಾನದಲ್ಲಿ ಅಮಾಯಕ ವ್ಯಕ್ತಿಯ ಶಿರಚ್ಛೇದನ: ತೀವ್ರವಾಗಿ ಖಂಡಿಸಿದ ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ವ್ಯಕ್ತಿಯ ಶಿರಚ್ಛೇದನವನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, “ಉದಯಪುರದಲ್ಲಿ ಅಮಾಯಕನ ಶಿರಚ್ಛೇದ ಮಾಡಿದ ಬರ್ಬರ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅಂತಹ ಕ್ರೌರ್ಯವನ್ನು ಸಮರ್ಥಿಸಲು ಸಾಧ್ಯವಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು” ಎಂದು ಹೇಳಿದ್ದಾರೆ.

ಉದಯಪುರದಲ್ಲಿ ಧರ್ಮಾಂಧನೊಬ್ಬ ನಡೆಸಿರುವ ಬರ್ಬರ ಹತ್ಯೆ ಖಂಡನೀಯ. ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ. ಕುರುಡು ಹಿಂಸೆಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪಗಳು. ಅಲ್ಲಿನ ರಾಜ್ಯ ಸರ್ಕಾರ ಕಾನೂನು ಕ್ರಮದ ಮೂಲಕ ಕೊಲೆಗಡುಕನಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಿಎಂ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ತೈಲಿ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಇಂದು ಮಧ್ಯಾಹ್ನ ಹತ್ಯೆ ಮಾಡಿದ್ದರು. 

ಘಟನೆ ಬಳಿಕ, ರಾಜಸ್ತಾನದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಕರ್ಫ್ಯೂ ಹೇರಲಾಗಿದ್ದು, ಇಂಟರ್ ನೆಟ್ ಸೇವೆಯನ್ನೂ ಸಹ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಕೊಲೆ ಮಾಡಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ದುಷ್ಕರ್ಮಿಗಳು, ಪ್ರಧಾನಿ ಮೋದಿಗೂ ಬೆದರಿಕೆ ಹಾಕಿದ್ದರು. ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿರುವ ದುಷ್ಕರ್ಮಿಗಳನ್ನು ಈಗಾಗಲೇ ಬಂಧಿಸಲಾಗಿದೆ.

SCROLL FOR NEXT