ರಾಜಕೀಯ

ಬಸನಗೌಡ ಪಾಟೀಲ್ ಯತ್ನಾಳ್‌- ಅರುಣ್‌ ಸಿಂಗ್‌ ಭೇಟಿ: 15 ನಿಮಿಷ ಗೌಪ್ಯ ಮಾತುಕತೆ; ಬಿಜೆಪಿ ಪಾಳೆಯದಲ್ಲಿ ಕುತೂಹಲ!

Shilpa D

ಬೆಂಗಳೂರು: ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಹಾಗೂ ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ್‌ ಯತ್ನಾಳ್‌ ಮಂಗಳವಾರ ರಾತ್ರಿ ರಹಸ್ಯ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿದೆ. ವಿಜಯಪುರ ಪ್ರವಾಸದಲ್ಲಿರುವ ಅರುಣ್‌ ಸಿಂಗ್ ಯತ್ನಾಳ್‌ ಅವರನ್ನು ಭೇಟಿ ಮಾಡಿ 15 ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.

ನಗರದ ಹೊರ ಭಾಗದಲ್ಲಿರುವ ಯತ್ನಾಳ ಮಾಲೀಕತ್ವದ ಹೈಪರ್ ಮಾರ್ಟ್ ನಲ್ಲಿ ಈ ರಹಸ್ಯ ಸಭೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅರುಣ್‌ ಸಿಂಗ್, ಸಂಸದ ರಮೇಶ್ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ರವಿಕಾಂತ್‌ ಪಾಟೀಲ್‌ ಸೇರಿ ಬಿಜೆಪಿಯ ಅನೇಕ ಮುಖಂಡರು ಭಾಗವಹಿಸಿದ್ದರು. ಆದರೆ, ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತ್ರ ಈ ಸಮಾವೇಶದಿಂದ ದೂರವೇ ಉಳಿದಿದ್ದರು.

ವಿಜಯಪುರ ಜಿಲ್ಲೆಗೆ ಅರುಣ್‌ ಸಿಂಗ್ ಬರುವ ವಿಚಾರ ಗೊತ್ತಿದ್ದರೂ ಯತ್ನಾಳ್‌ ಗೈರಾಗಿದ್ದು, ಅರುಣ್‌ ಸಿಂಗ್ ಅವರನ್ನು ಕೊಂಚ ವಿಚಲಿತರನ್ನಾಗಿ ಮಾಡಿತ್ತು. ರಾಜ್ಯ ಉಸ್ತುವಾರಿ ಬಂದರೆ ಸಿಎಂ ರಿಂದ ಹಿಡಿದು ಸಚಿವರು ಬಂದು ಸ್ವಾಗತಿಸಿ ಕುಶಲೋಪರಿ ವಿಚಾರಿಸುವುದು ಸಂಪ್ರದಾಯವಾಗಿದೆ. ಆದರೆ, ತಮ್ಮ ತವರು ಜಿಲ್ಲೆ ವಿಜಯಪುರಕ್ಕೆ ಬಂದರೂ ಯತ್ನಾಳ್‌ ಅರುಣ್‌ ಸಿಂಗ್ ಅವರನ್ನು ಭೇಟಿ ಮಾಡದೇ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಂತರ ಕಾಯ್ದುಕೊಂಡಿದ್ದರು.

ಯತ್ನಾಳ ಗೈರಿನಿಂದ ಉಂಟಾಗಬಹುದಾದ ಗೊಂದಲ ಮತ್ತು ಹೋಗಬಹುದಾದ ತಪ್ಪು ಸಂದೇಶದ ಬಗ್ಗೆ ಜಾಗೃತರಾದ ಅರುಣಸಿಂಗ್ ಇಂಡಿಯಿಂದ ನೇರವಾಗಿ ವಿಜಯಪುರಕ್ಕೆ ಆಗಮಿಸಿ ಯತ್ನಾಳ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ವಿಜಯಪುರ ಮಹಾನಗರ ಪಾಲಿಕೆಯ ನೂತನ ಸದಸ್ಯರಾಗಿ ಆಯ್ಕೆಯಾದ ಬಿಜೆಪಿ ಕಾರ್ಪೋರೇಟರ್‌ಗಳು ಕೂಡ ಅರುಣ್‌ ಸಿಂಗ್ ಅವರನ್ನು ಭೇಟಿ ಮಾಡಿದರು. ಅಲ್ಲದೇ, ಅವರಿಗೆ ಅರುಣ್‌ ಸಿಂಗ್ ಶುಭ ಕೋರಿದರು.

ಬಳಿಕ ಯತ್ನಾಳ್‌ ಅವರನ್ನು ಪ್ರತ್ಯೇಕವಾಗಿ ಕರೆದ ಅರುಣ್‌ ಸಿಂಗ್ ಅವರನ್ನು ಅಪ್ಪಿಕೊಂಡು ಸುಮಾರು 15 ನಿಮಿಷಗಳ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದರು. ಈ ಮಾತುಕತೆಯ ವಿಚಾರಗಳು ಇನ್ನೂ ತಿಳಿದುಬಂದಿಲ್ಲ.

SCROLL FOR NEXT