ರಾಜಕೀಯ

ಹಾಸನ: ಡಿಸಿಸಿ ಅಧ್ಯಕ್ಷರ ನೇಮಕ: ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ

Srinivas Rao BV

ಹಾಸನ: ಹಾಸನ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದ್ದು, ಹೊಸ ಮುಖವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಹೈಕಮಾಂಡ್ ಇತ್ಟೀಚೆಗೆ ಇಹೆಚ್ ಲಕ್ಷ್ಮಣ್ ಎಂಬ ಹೊಸ ಮುಖವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಆದರೆ ಈ ಹುದ್ದೆಗೆ ಸ್ಥಳೀಯ ಮಟ್ಟದಲ್ಲಿ 6 ಕ್ಕೂ ಹೆಚ್ಚು ಮಂದಿ ನಾಯಕರು ಕಣ್ಣಿಟ್ಟಿದ್ದರು.

ಮಾಜಿ ಎಂಎಲ್ ಸಿ ಎಂಎ ಗೋಪಾಲಸ್ವಾಮಿ, ಹೆಚ್ ಕೆ ಮಹೇಶ್, ದೇವರಾಜೇಗೌಡ, ಪಟೇಲ್ ಶಿವಪ್ಪ, ಎಂಕೆ ಶೇಷೇಗೌಡ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದರು. ಈ ನಾಯಕರು ತಮ್ಮ ಬೆಂಬಲಿಗರ ಮೂಲಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹುದ್ದೆ ಗಿಟ್ಟಿಸಲು ಲಾಬಿ ನಡೆಸುತ್ತಿದ್ದರು ಅಷ್ಟೇ ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದರು.

ಆದರೆ ಯಾರೂ ಸಹ ಈ ನಿರ್ಧಾರವನ್ನು ಅಂದಾಜಿಸಿರಲಿಲ್ಲ. ಹೈಕಮಾಂಡ್ ನ ನಿರ್ಧಾರವನ್ನು  ಕಾಂಗ್ರೆಸ್ ನಾಯಕರು ವಿರೋಧಿಸಿದ್ದಾರೆ. ಹೈಕಮಾಂಡ್ ಒಕ್ಕಲಿಗ ಅಥವಾ ಕುರುಬ ಸಮುದಾಯದ ವ್ಯಕ್ತಿಯನ್ನು ನೇಮಕ ಮಾಡಿದ್ದರೆ ಉತ್ತಮವಾಗಿತ್ತು ಎಂಬ ಅಭಿಪ್ರಾಯವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ. ಅಚ್ಚರಿಯ ವ್ಯಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಹೈಕಮಾಂಡ್ ತಪ್ಪು ನಿರ್ಧಾರ ಕೈಗೊಂಡಿದೆ, ಬಿಜೆಪಿಯಲ್ಲಿ ದೀರ್ಘಾವಧಿ ಕೆಲಸ ಮಾಡಿದ ವ್ಯಕ್ತಿಗೆ ಜಿಲ್ಲಾ ಅಧ್ಯಕ್ಷರ ಹುದ್ದೆಯನ್ನು ನೀಡಲಾಗಿದೆ ಎಂದು ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೌಪ್ಯತೆಯ ಷರತ್ತು ವಿಧಿಸಿ ಮಾತನಾಡಿರುವ ಕಾಂಗ್ರೆಸ್ ನಾಯಕರೊಬ್ಬರು ಪಕ್ಷದ ಈ ನಡೆ ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

SCROLL FOR NEXT