ರಾಜಕೀಯ

'ಕೈ' ತಪ್ಪಿದ ಬಳ್ಳಾರಿ ಮತ್ತೆ ಪಡೆಯಲು ಚಿಂತನೆ: ಗಣಿ ಜಿಲ್ಲೆಯ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕಾ- ಸೋನಿಯಾ ಭಾಗಿ!

Shilpa D

ಬೆಂಗಳೂರು: ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯು ವೇಗ ಪಡೆಯುತ್ತಿದ್ದಂತೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರಾರಂಭಿಸಿದ ಮೆಗಾ ರ್ಯಾಲಿ ಬಳ್ಳಾರಿ ತಲುಪುವ ವೇಳೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸುವ ನಿರೀಕ್ಷೆಯಿದೆ.

ಅಕ್ಟೋಬರ್ 18 ಅಥವಾ 19 ರಂದು ಬಳ್ಳಾರಿಯಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ.  ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್‌ನ ಪ್ರಮುಖರನ್ನು ಜಿಲ್ಲೆಗೆ ಕರೆತರುವುದು, ಹಾಗೂ ಕೈತಪ್ಪಿದ ಜಿಲ್ಲೆಯನ್ನು ಮರಳಿ ಪಡೆಯಲು ಕೆಪಿಸಿಸಿ ಚಿಂತನೆ ನಡೆಸಿದೆ.

ಇದಲ್ಲದೆ, 1999 ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಇಲ್ಲಿಂದ ಸ್ಪರ್ಧಿಸಿ ಉತ್ತಮ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಸೋನಿಯಾ ಗಾಂಧಿ ಬಳ್ಳಾರಿಯೊಂದಿಗೆ ನಿಕಟ ಒಡನಾಟ ಹೊಂದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿಯೂ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಪ್ರಬಲ ಕೋಟೆಯಾಗಿದ್ದ ಬಳ್ಳಾರಿ  ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಇಬ್ಬರು ಶಾಸಕರಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷವು ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, 5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

ಇತ್ತೀಚೆಗೆ ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರ್ಯಾಲಿ ನಡೆಸಲು ಸೂಕ್ತ ಸ್ಥಳವನ್ನು ಗುರುತಿಸಲು ನಗರಕ್ಕೆ ಆಗಮಿಸಿದ್ದರು.

ಶಿವಕುಮಾರ್ ಮತ್ತು ಸುರ್ಜೇವಾಲಾ ಅವರು ಕಾರ್ಯಕ್ರಮದ ಯಶಸ್ಸಿನ ಬಗ್ಗೆ ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ, ಆದರೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ನಾಯಕರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಅಕ್ಟೋಬರ್ 17 ರಂದು ಎಐಸಿಸಿ ಅಧ್ಯಕ್ಷರ ಚುನಾವಣೆ ನಿಗದಿಯಾಗಿರುವುದರಿಂದ ರ್ಯಾಲಿ ಅಕ್ಟೋಬರ್ 18 ಅಥವಾ 19 ರಂದು ನಡೆಯಲಿದೆ ಎಂದು ಅವರು ಹೇಳಿದರು.

SCROLL FOR NEXT