ರಾಜಕೀಯ

ಕಾಂಗ್ರೆಸ್ ಅನ್ನು ರಿಪೇರಿ ಮಾಡೋಕೆ ಹೊರಟ ತರೂರ್ ಸದ್ದಡಗಿಸಿದ ಗಾಂಧಿ ಕುಟುಂಬ ಎಂದ ಬಿಜೆಪಿ; ಸಿದ್ದು ವಿರುದ್ಧ ವಾಗ್ಧಾಳಿ

Ramyashree GN

ಬೆಂಗಳೂರು: ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಶಿ ತರೂರ್ ಸೋಲಿಗೆ ಗಾಂಧಿ ಕುಟುಂಬವೇ ಕಾರಣ ಎಂದು ಆರೋಪಿಸಿದೆ.

ಕಾಂಗ್ರೆಸ್ಸನ್ನು ರಿಪೇರಿ ಮಾಡೋಕೆ ಹೊರಟ ಶಶಿ ತರೂರ್ ಅವರ ಸದ್ದಡಗಿಸಿದ ಗಾಂಧಿ ಕುಟುಂಬ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಣೆ ಹಾಕಿದೆ. ಅಂದು ಸೀತಾರಾಮ ಕೇಸರಿ ಅವರಿಗೆ ಅವಮಾನ ಮಾಡಿದಂತೆ ನಾಳೆ ಖರ್ಗೆ ಅವರಿಗೂ ಅವಮಾನ ಮಾಡುವುದಿಲ್ಲ ಎಂದು ಕಾಂಗ್ರೆಸ್ ಮಾತು ಕೊಡಬಲ್ಲದೆ? ಎಂದಿದೆ.

ಗಾಳಿಯಲ್ಲಿ ಗುಂಡು ಹೊಡೆದಂತೆ, ಕೇವಲ ಸಾಕ್ಷ್ಯ ರಹಿತ ಆರೋಪ ಮಾಡಿದ್ದೇ ಸಿದ್ದರಾಮಯ್ಯ ಅವರೇ, ಯಾವ ಕಾರಣಕ್ಕಾಗಿ ನಿಮಗೆ ದುಬಾರಿ ವಾಚ್ ಉಡುಗೊರೆಯಾಗಿ ಸಿಕ್ಕಿದ್ದು? ನೀವು #WatchPe ಮೂಲಕ ಪಡೆದ ಲಂಚವೆಷ್ಟು? ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ! ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಅನುದಾನವನ್ನು ಕಬಳಿಸಿದವರು ನಿಮ್ಮ ಸಂಪುಟದಲ್ಲಿ ಸಚಿವರಾಗಿದ್ದಿದ್ದು ಮರೆತು ಹೋಯಿತೇ? #PillowPe ಹಗರಣದ ಸೂತ್ರಧಾರರು ನೀವೇ ಅಲ್ವೇ ಸಿದ್ದರಾಮಯ್ಯ? ಎಂದು ಸಿದ್ದರಾಮಯ್ಯ ಅವರನ್ನು ಕಿಚಾಯಿಸಿದೆ.

ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಸೋಲಾರ್ ಹಗರಣದಲ್ಲಿ 'ಲಕ್ಷ್ಮಿ ಭಾಗ್ಯ' ಪಡೆದಿದ್ದು ಯಾರು? ಸಂಬಂಧಿಕರೇ ಸೋಲಾರ್ ಉತ್ಪಾದಕರಾಗಿದ್ದು ಯಾರ ಕೃಪೆಯಿಂದ?  ಈ ಹಗರಣದಲ್ಲಿ #LaxmiPay ಯಿಂದ ಎಷ್ಟು ಲಂಚ, #PayDK ಆಗಿದೆ? ಮೌನವೇಕೆ #SayDK ಎಂದು ಕಾಂಗ್ರೆಸ್‌ನ ಸೇಸಿಎಂ ಅಭಿಯಾನಕ್ಕೆ ತಿರುಗೇಟು ನೀಡಿದೆ.

ಮುಂದುವರಿದು, ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರಾಗಿದ್ದ ಆಂಜನೇಯ ಅವರ 'ವಿಜಯ ಬ್ಯಾಂಕ್' ಖಾತೆಯಲ್ಲಿ ಠೇವಣಿಯಾಗಿದ್ದು ಯಾರ ಹಣ? ಆಯ್ಕೆ : 1 - ಸಿದ್ದರಾಮಯ್ಯ, 2 - ಅಂದಿನ ಕಾಂಗ್ರೆಸ್ ಸಿಎಂ, 3 - ಇಂದಿನ ವಿಪಕ್ಷ ನಾಯಕ. ಒಂದೇ ವಾಕ್ಯದಲ್ಲಿ ಉತ್ತರಿಸಿ. #BankPe ಮೂಲಕ ಸಿದ್ದರಾಮಯ್ಯ ಅವರಿಗೆ ಎಷ್ಟು ಸಂದಾಯವಾಗಿದೆ? ಹುದ್ದೆಗಾಗಿ ಅರ್ಜಿ ಸಲ್ಲಿಸದವರನ್ನು ಲಂಚ ಪಡೆದು ನೇಮಕಾತಿ ಮಾಡಿದ್ದು‌ ಕಾಂಗ್ರೆಸ್. ರೈತರಿಗೆ ಮೋಸ ಮಾಡಿ ಸೋಲಾರ್ ಹಗರಣ ಮಾಡಿದ್ದು ಕಾಂಗ್ರೆಸ್. ಬಿಡಿಎಯನ್ನು ಭ್ರಷ್ಟರ ಅಂಗಳ ಮಾಡಿದ್ದು ಕಾಂಗ್ರೆಸ್. ಇದನ್ನು ಹಿರಿಯ ಯುವನಾಯಕ ರಾಹುಲ್‌ ಗಾಂಧಿ ಅವರ ಗಮನಕ್ಕೆ ಏಕೆ ತಂದಿಲ್ಲ ಎಂದಿದ್ದಾರೆ.

ಲೋಕಾಯುಕ್ತಕ್ಕೆ ಮೊಳೆ ಹೊಡೆದು, ಎಸಿಬಿಯನ್ನು #ActiveCollectionBureau ರೀತಿ ಬಳಸಿಕೊಂಡಿದ್ದೇ ಸಿದ್ದರಾಮಯ್ಯ ಅವರ ಸಾಧನೆ. ಸಿದ್ದರಾಮಯ್ಯ ಅವರಿಗೆ ಅಂದು ತನಿಖೆ ಮಾಡಿಸುವ ತಾಕತ್ತು ಇರಲಿಲ್ಲವೇ ಅಥವಾ ತನಿಖೆಯಾದರೆ ಜೈಲಿಗೆ ಹೋಗಬೇಕಾದೀತು ಎಂಬ ಭಯ ಕಾಡಿತ್ತೇ? ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ! ಎಂದು ದೂರಿದೆ.

SCROLL FOR NEXT