ರಾಜಕೀಯ

ಪ್ರಚಾರಕ್ಕೆ ಬಾರದಿದ್ದರೂ ಚನ್ನಪಟ್ಟಣದ ಜನತೆ ನನ್ನ ಗೆಲ್ಲಿಸಿದ್ದಾರೆ: ಕ್ಷೇತ್ರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ; ನಾನು ಟೂರಿಂಗ್ ಟಾಕೀಸ್ ಟೂರ್ ಅಲ್ಲ!

Shilpa D

ರಾಮನಗರ: ಮುಂದಿನ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ. ಚನ್ನಪಟ್ಟಣ ಕ್ಷೇತ್ರವನ್ನ ಬಿಟ್ಟು ಹೋಗುವ ಪ್ರಮೇಯವೇ ಇಲ್ಲ. ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ಚನ್ನಪಟ್ಟಣ ತಾಲೂಕಿನ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೆ ಜೊತೆಗೆ ಸಭೆ ನಡೆಸಿದ ಕುಮಾರಸ್ವಾಮಿ, ಸ್ವಕ್ಷೇತ್ರದಲ್ಲಿ ಪಕ್ಷವನ್ನ ಸದೃಢವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಚನ್ನಪಟ್ಟಣ ಹಾಗೂ ರಾಮನಗರ ನನ್ನ ಕಣ್ಣುಗಳಿದ್ದಂತೆ. ಎರಡು ಕ್ಷೇತ್ರದ ಜನರು ನನ್ನನ್ನು ಬೆಳೆಸಿದ್ದಾರೆ. ಹಲವು ಕ್ಷೇತ್ರದಿಂದ ಸ್ಪರ್ಧಿಸುವಂತೆ ಬೆಂಬಲಿಗರು ಕೇಳಿಕೊಂಡಿದ್ದಾರೆ. ಆದರೆ ನಾನು ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಸ್ಪರ್ಧೆ ಮಾಡೋ ಕ್ಷೇತ್ರದ ಬಗ್ಗೆ ಯಾವುದೇ ಗೊಂದಲ ಇಲ್ಲ. ಟೂರಿಂಗ್ ಟಾಕೀಸ್ ತರ ಒಂದೊಂದು ಚುನಾವಣೆಗೆ ಒಂದೊಂದು ಕ್ಷೇತ್ರಕ್ಕೆ ನಾನು ಹೋಗಲ್ಲ. ನಮ್ಮ ಪಕ್ಷದಲ್ಲಿ ಆ ರೀತಿಯ ವಾತಾವರಣ ಇಲ್ಲ. ಮಾಗಡಿಯಿಂದ ಸ್ಪರ್ಧೆಗಿಳಿಯುವಂತೆ ಕೆಲವರು ಒತ್ತಡ ಹೇರಿದ್ರು. ಆದ್ರೆ ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟ ತೀರ್ಮಾನ ಮಾಡಿದ್ದೇವೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಕಾರ್ಯಕರ್ತರು ಈ‌ ರೀತಿ ವದಂತಿಗಳಿಗೆ ಕಿವಿ ಕೊಡಬೇಡಿ ಹಾಗೂ ಆತಂಕ ಪಡಬೇಡಿ ಎಂದರು. ಪ್ರಚಾರಕ್ಕೆ ಬರದೇ ಇದ್ದರೂ ಗೆಲ್ಲಿಸುವ ಕ್ಷೇತ್ರ ಚನ್ನಪಟ್ಟಣ‌ ಇಡೀ ದೇಶದಲ್ಲಿ, ನಾಮಪತ್ರ ಸಲ್ಲಿಸಿ ಅಭ್ಯರ್ಥಿ ಪ್ರಚಾರಕ್ಕೆ ಬರದೇ ಇದ್ದರೂ, ಕಾರ್ಯಕರ್ತರೆ ಅಭ್ಯರ್ಥಿಯನ್ನು ಗೆಲ್ಲಿಸುವ ಕ್ಷೇತ್ರ ಇದ್ದರೆ ಅದು ಚನ್ನಪಟ್ಟಣ‌ ಕ್ಷೇತ್ರ.

ಚನ್ನಪಟ್ಟಣದಲ್ಲಿ ನಾನು ನಾಮಪತ್ರ ಸಲ್ಲಿಸಿ ಹೋಗಿದ್ದೆ ಅಷ್ಟೇ. ಚುನಾವಣೆ ವೇಳೆ ಪ್ರತಿಯೊಬ್ಬ ಕಾರ್ಯಕರ್ತನೂ ನಾನೇ ಅಭ್ಯರ್ಥಿ ಅಂತಾ ತಿಳಿದು ಚುನಾವಣೆ ಮಾಡಿದ್ದೀರಿ ಹಾಗಾಗಿ ಆ ಕ್ಷೇತ್ರ ಮರೆಯುವುದುಂಟೆ. ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡಲ್ಲ. ಇದೆಲ್ಲವೂ ತಾಲೂಕಿನ ವಿರೋಧ ಪಕ್ಷದ ನಾಯಕರು ಹಬ್ಬಿಸಿರುವ ಗಾಳಿ ಸುದ್ದಿ ಇದಕ್ಕೆ ಕಾರ್ಯಕರ್ತರು ಕಿವಿಕೊಡಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

SCROLL FOR NEXT