ರಾಜಕೀಯ

ನಾನು ಆರೋಗ್ಯವಾಗಿದ್ದೇನೆ, ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ: ದೇವೇಗೌಡ

Lingaraj Badiger

ಬೆಂಗಳೂರು: ನನ್ನ ಆರೋಗ್ಯ ಉತ್ತಮವಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಮಂತ್ರಿಗಳು; ಸ್ವಲ್ಪ ಪ್ರಮಾಣದಲ್ಲಿ ಅನಾರೋಗ್ಯ ಉಂಟಾದ ಕಾರಣಕ್ಕೆ ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದ್ದರು. ಆದಕಾರಣ ಕೆಲ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾಯಿತು. ಇನ್ನು ಕೆಲ ದಿನ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮನೆಯಿಂದಲೇ ನನ್ನೆಲ್ಲಾ ರಾಜಕೀಯ, ಸಂಸದೀಯ ಹಾಗೂ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಲಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೆಲವು ದಿನಗಳ ಮಟ್ಟಿಗೆ ನನ್ನ ಭೇಟಿಗೆ ಬರುವುದು ಬೇಡ ಎಂದು ಮಾಜಿ ಪ್ರಧಾನಿ ಮನವಿ ಮಾಡಿದ್ದಾರೆ.

ಇನ್ನು ಕೆಲ ದಿನಗಳ ನಂತರ ನಾನೇ ಖುದ್ದು, ಪಕ್ಷದ ಕಚೇರಿಗೆ ಭೇಟಿ ನೀಡುವುದರ ಜತೆಗೆ, ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದೆನೆ. ಯಾವುದೇ ಕಾರಣಕ್ಕೂ ಮುಖಂಡರು, ಕಾರ್ಯಕರ್ತರು ಅನ್ಯತಾ ಭಾವಿಸಬಾರದು ಎಂದು ಕೋರುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ನನ್ನ ನಿವಾಸಕ್ಕೆ ಭೇಟಿ ನೀಡಿ ನನ್ನ ಆರೋಗ್ಯ ವಿಚಾರಿಸಿದ ಪ್ರತಿಪಕ್ಷ ನಾಯಕ  ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ, ಕಂದಾಯ ಸಚಿವ  ಅಶೋಕ್ ಸೇರಿದಂತೆ ಇತರ ಎಲ್ಲ ಸಚಿವರು, ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ, ನನ್ನ ಆರೋಗ್ಯಕ್ಕಾಗಿ ನಾಡಿನ ದೇವಾಲಯಗಳಲ್ಲಿ ಪೂಜೆ, ಹರಕೆ ಮಾಡಿಕೊಂಡು ಅನ್ನದಾನ ಇತ್ಯಾದಿಗಳನ್ನು ಮಾಡಿದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಅವರೆಲ್ಲರಿಗೂ ನನ್ನ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.

SCROLL FOR NEXT