ರಾಜಕೀಯ

ಮೌಢ್ಯತೆ ಹೋಗಲಾಡಿಸಲು ಸ್ಮಶಾನದಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತೇನೆ: ಸತೀಶ್ ಜಾರಕಿಹೊಳಿ

Manjula VN

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೊಸದಾಗಿ ವಾಹನಗಳನ್ನು ತರಲಾಗಿದ್ದು, ಮೌಢ್ಯ ಹೋಗಲಾಡಿಸಲು ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಸ್ಮಶಾನಲ್ಲಿ ಪೂಜೆ ಸಲ್ಲಿಸಿ ಪ್ರಚಾರ ವಾಹನಗಳಿಗೆ ಚಾಲನೆ ನೀಡಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ರಾಹುಕಾಲ ಇರುತ್ತದೆ. ಎ.13ರಿಂದ 20ರ ವರೆಗಿನ ಅವಧಿಯಲ್ಲೂ ರಾಹುಕಾಲವಿದ್ದರೆ, ಆ ವೇಳೆಯಲ್ಲೇ  ನಾನು ನಾಮಪತ್ರ ಸಲ್ಲಿಸುತ್ತೇನೆ. ರಾಹುಕಾಲ ಅಥವಾ ಒಳ್ಳೆಯ ಕಾಲ ಎಂಬುದು ಕೇವಲ ನಮ್ಮ ಭ್ರಮೆ’ ಎಂದು ಹೇಳಿದರು.

‘ಮೌಢ್ಯಾಚರಣೆ ವಿರೋಧಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನಮ್ಮ ವಿಚಾರಧಾರೆಗಳನ್ನು ಪ್ರಚಾರ ಮಾಡಲಾಗುತ್ತಿದೆ. ಸಮಾಜ ಸುಧಾರಕರಾದ ಬಸವಣ್ಣ, ಬುದ್ಧ ಮತ್ತು ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನವಷ್ಟೇ ಇದು. ‘ಯಮಕನಮರಡಿ ಕ್ಷೇತ್ರದಲ್ಲಿ ಈ ಬಾರಿ ಪ್ರಚಾರ ಮಾಡುತ್ತೇನೆಂದು ತಿಳಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿದೆ. ಸಿದ್ದರಾಮಯ್ಯ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ವರುಣಾ ಕ್ಷೇತ್ರ 40 ವರ್ಷಗಳಿಂದ ಅವರ ಕೈಹಿಡಿದಿದೆ. ಈ ಬಾರಿ ಅಲ್ಲಿ ಸೋಲುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಬೆಳಗಾವಿ ಜಿಲ್ಲೆಯ 12 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT