ರಾಜಕೀಯ

ಹಳೇ ಮೈಸೂರು ಭಾಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಪ್ರಚಾರ: ಶೀಘ್ರದಲ್ಲೇ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

Shilpa D

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಪ್ರಚಾರ ಆರಂಭಿಸಲಿದ್ದಾರೆ. ಹಳೇ ಮೈಸೂರು, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಜನತಾದಳ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ  ಹೇಳಿದ್ದಾರೆ.

ಜೆಡಿಎಸ್ ಭದ್ರಕೋಟೆ ಎನಿಸಿರುವ ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡುವುದಾಗಿ ಗೌಡರು ತಿಳಿಸಿದ್ದಾರೆ.

ಸತತ ಬರಗಾಲದಿಂದ ಬಳಲಿದ್ದ ರೈತರಿಗೆ ಕೃಷ್ಣಾ ಯೋಜನೆಯ ಮೂಲಕ ಪರಿಹಾರ ನೀಡಿದ ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲೂ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ ಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಇತರೆಡೆ ಪ್ರಚಾರ ನಡೆಸಲಿದ್ದಾರೆ ಎಂದರು.

ಒಂದು ವೇಳೆ ಪೂರ್ಣ ಪ್ರಮಾಣದ ಜನಾದೇಶ ಬರದಿದ್ದರೇ  ಸರ್ಕಾರ ರಚಿಸಲು ಜೆಡಿಎಸ್ ಕಾಂಗ್ರೆಸ್ ಅಥವಾ ಬಿಜೆಪಿಯನ್ನು ಸಂಪರ್ಕಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಪುನರುಚ್ಚರಿಸಿದರು.

ಜೆಡಿಎಸ್‌ನ ಪ್ರಣಾಳಿಕೆ ರಚನಾ ಸಮಿತಿ ಸೋಮವಾರ ಬೆಂಗಳೂರಿನಲ್ಲಿ ಎಂಎಲ್‌ಸಿ ಬಿಎಂ ಫಾರೂಕ್ ನೇತೃತ್ವದಲ್ಲಿ ಸಭೆ ನಡೆಸಿ ಪ್ರಣಾಳಿಕೆ ಕರಡು ಪರಿಶೀಲನೆ ನಡೆಸಿತು.

ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ, ವಸತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ‘ಪಂಚರತ್ನ’ ಕಾರ್ಯಕ್ರಮಗಳು,  ಪಂಚರತ್ನ ರ‍್ಯಾಲಿಯಲ್ಲಿ ಕುಮಾರಸ್ವಾಮಿ ಘೋಷಿಸಿದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.  ಶೀಘ್ರದಲ್ಲೇ ಪ್ರಣಾಳಿಕೆಗೆ ಅಂತಿಮ ಸ್ಪರ್ಶ ನೀಡಲಾಗುವುದು ಮತ್ತು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ ನಂತರ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಫಾರೂಕ್ ಹೇಳಿದರು.

SCROLL FOR NEXT