ರಾಜಕೀಯ

ನಾನು ಟಿಕೆಟ್ ಗಾಗಿ ಬಿಜೆಪಿ ಸೇರಿಲ್ಲ: ಮಾಜಿ ಶಾಸಕ ಎಟಿ ರಾಮಸ್ವಾಮಿ

Lingaraj Badiger

ಹಾಸನ: ನಾನು ಟಿಕೆಟ್ ಗಾಗಿ ಬಿಜೆಪಿ ಸೇರಿಲ್ಲ. ಯಾವುದೇ ಷರತ್ತಿಲ್ಲದೇ ಕೇಸರಿ ಪಕ್ಷ ಸೇರ್ಪಡೆಯಾಗಿರುವುದಾಗಿ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಬುಧವಾರ ಹೇಳಿದ್ದಾರೆ. 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗುವಾಗ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ಹಿರಿಯ ನಾಯಕರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ಆದರೆ ನಾನು ನಿರಾಕರಿಸಿದ್ದೇನೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಪ್ರತಿಪಕ್ಷಗಳು, ಎಟಿ ರಾಮಸ್ವಾಮಿ ಅವರಿಗೆ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಹೇಳುತ್ತಿವೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಎಟಿಆರ್ ಹೇಳಿದ್ದಾರೆ.

ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಪ್ರಜಾಸತ್ತಾತ್ಮಕ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಚುನಾವಣಾ ಗೆಲುವಿಗಾಗಿ ಕೋಟ್ಯಂತರ ರೂಪಾಯಿ ಹಣ ಲೂಟಿ ಹೊಡೆಯಲು ದಾರಿ ಮಾಡಿಕೊಟ್ಟಿದೆ. ರಾಜಕೀಯ ವ್ಯಾಪಾರೀಕರಣ ಆಗುತ್ತಿರುವುದು ದುರದೃಷ್ಟಕರ ಎಂದು ಎಟಿ ರಾಮಸ್ವಾಮಿ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಈಗ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಹೆಚ್ಚಿರುವುದರಿಂದ ಮೌಲ್ಯಗಳು ಮತ್ತು ನೈತಿಕತೆ ಇರುವ ಜನ ರಾಜಕೀಯಕ್ಕೆ ಬರಲು ಸಾಧ್ಯವಿಲ್ಲ. ದೀನದಲಿತರು, ಬಡವರು ಮತ್ತು ನಿರ್ಗತಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಕ್ರಿಯ ರಾಜಕಾರಣದಲ್ಲಿ ಉಳಿಯುತ್ತೇನೆ. 2024ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಹೇಳಿದರೆ ಸ್ಪರ್ಧಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT